ಇನ್ನು ಲಿಂಗಧಾರಣಸ್ಥಲವದೆಂತೆಂದಡೆ:
ಆ ಸದ್ಗುರುಸ್ವಾಮಿ ಶಿಷ್ಯನ ಏಕಭುಕ್ತೋಪವಾಸಂಗಳ ಮಾಡಿಸಿ
ಪಂಚಗವ್ಯಮಂ ಕೊಟ್ಟು, ಗಣತಿಂತಿಣಿಗೆ ದೀರ್ಘದಂಡ ನಮಸ್ಕಾರವಂ ಮಾಡಿ,
ದಶವಾಯು ಶುದ್ಧ, ಅಷ್ಟ ತನುಶುದ್ಧ, ಜೀವಶುದ್ಧ, ಆತ್ಮಶುದ್ಧವಂ ಮಾಡಿ,
ಇಂದ್ರಿಯಲಿಖಿತವಂ ತೊಡದು ಶಿವಲಿಖಿತವಂ ಲಿಖಿಸಿ,
ವಿಭೂತಿಯನಿಟ್ಟು, ಸ್ಥಾನಸ್ಥಾನದಲ್ಲಿ ರುದ್ರಾಕ್ಷೆಯಂ ಧರಿಸಿ,
ಕಳಶಾಭಿಷೇಕವಂ ಮಾಡಿ, ಆ ಶಿಷ್ಯನ ಮಸ್ತಕದ ಮೇಲೆ
ತಮ್ಮ ಹಸ್ತಕಮಲವನಿರಿಸಿ,
ಆತನ ಬ್ರಹ್ಮರಂಧ್ರದ ಚಿತ್ಪ್ರಭಾ ಲಿಂಗಮಂ ತೆಗೆದು ಧ್ಯಾನಿಸಿ,
ಆ ಶಿಷ್ಯನ ಹಸ್ತಮಂ ಪಂಚಾಮೃತದಿಂ ತೊಳೆದು,
ಅಂಗದ ಮೇಲೆ ಲಿಂಗಮಂ ಪ್ರತಿಷ್ಠೆಯಂ ಮಾಡಿ
ಕರ್ಣದ್ವಾರದಲ್ಲಿ ಮೂಲಮಂತ್ರಮಂ ತುಂಬಿ
ಕೃತಾರ್ಥನ ಮಾಡಿದನಯ್ಯ ಎನ್ನ ಗುರು.
ದೀಯತೇ ಜ್ಞಾನಸಂಬಂಧಃ ಕ್ಷೀಯತೇ ಚ ಮಲತ್ರಯಂ |
ದೀಯತೇ ಕ್ಷೀಯತೇ ಚೈವ ಲಿಂಗದೀಕ್ಷಾಭಿಧೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Transliteration Innu liṅgadhāraṇasthalavadentendaḍe:
Ā sadgurusvāmi śiṣyana ēkabhuktōpavāsaṅgaḷa māḍisi
pan̄cagavyamaṁ koṭṭu, gaṇatintiṇige dīrghadaṇḍa namaskāravaṁ māḍi,
daśavāyu śud'dha, aṣṭa tanuśud'dha, jīvaśud'dha, ātmaśud'dhavaṁ māḍi,
indriyalikhitavaṁ toḍadu śivalikhitavaṁ likhisi,
vibhūtiyaniṭṭu, sthānasthānadalli rudrākṣeyaṁ dharisi,
kaḷaśābhiṣēkavaṁ māḍi, ā śiṣyana mastakada mēle
tam'ma hastakamalavanirisi,
ātana brahmarandhrada citprabhā liṅgamaṁ tegedu dhyānisi,
ā śiṣyana hastamaṁ pan̄cāmr̥tadiṁ toḷedu,
Aṅgada mēle liṅgamaṁ pratiṣṭheyaṁ māḍi
karṇadvāradalli mūlamantramaṁ tumbi
kr̥tārthana māḍidanayya enna guru.
Dīyatē jñānasambandhaḥ kṣīyatē ca malatrayaṁ |
dīyatē kṣīyatē caiva liṅgadīkṣābhidhīyatē ||''
intendudāgi,
apramāṇakūḍalasaṅgamadēvā.