ಹುಟ್ಟಿದಂದು ತನುವ ಸೋಂಕಿದ ಲಿಂಗವ,
ಸಾವಾಗ ಶರೀರದೊಡನೆ ಹೂಳಿಸಿಕೊಂಬ ಲಿಂಗವ ಬಿಟ್ಟು
ಬಟ್ಟೆ ಬಟ್ಟೆಯಲ್ಲಿ ಕಂಡ ಕಲ್ಲಿಗೆರಗುವ
ಭ್ರಷ್ಟಹೀನ ಹೊಲೆಯರ ನೋಡಾ!
ಇಂತಪ್ಪವರ ಶಿವಭಕ್ತರೆನಬಹುದೆ? ಎನಲಾಗದು.
ಶಿವಭಕ್ತರಾರೆಂದಡೆ ಹೇಳುವೆ ಕೇಳಿರಣ್ಣಾ;
ಗುರುಲಿಂಗಜಂಗಮವೆ ಶಿವನೆಂದು ನಂಬಿಪ್ಪಾತನೆ ಶಿವಭಕ್ತ.
ಗುರುವ ನಂಬದೆ, ಲಿಂಗವ ನಂಬದೆ, ಜಂಗಮವ ನಂಬದೆ
ಕಿರುಕುಳದೈವಕ್ಕೆ ಹರಕೆಯ ಹೊರುವವ
ಭಕ್ತನೂ ಅಲ್ಲ, ಭವಿಯೂ ಅಲ್ಲ.
ಇಂತಿವೆರಡರೊಳು ಒಂದೂ
ಅಲ್ಲಾದ ಎಡ್ಡಗಳ ನಾನೇನೆಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Huṭṭidandu tanuva sōṅkida liṅgava,
sāvāga śarīradoḍane hūḷisikomba liṅgava biṭṭu
baṭṭe baṭṭeyalli kaṇḍa kalligeraguva
bhraṣṭahīna holeyara nōḍā!
Intappavara śivabhaktarenabahude? Enalāgadu.
Śivabhaktarārendaḍe hēḷuve kēḷiraṇṇā;
guruliṅgajaṅgamave śivanendu nambippātane śivabhakta.
Guruva nambade, liṅgava nambade, jaṅgamava nambade
kirukuḷadaivakke harakeya horuvava
bhaktanū alla, bhaviyū alla.
Intiveraḍaroḷu ondū
allāda eḍḍagaḷa nānēnembenayyā
paramaguru paḍuviḍi sid'dhamallināthaprabhuve.