ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಈ ಮೂರು ಮಲತ್ರಯಂಗಳು.
ಒಂದು ಕೆಂಪಿನ ಮಲ; ಒಂದು ಬೆಳ್ಳಿನ ಮಲ;
ಒಂದು ಕಪ್ಪಿನ ಮಲ.
ಈ ಮೂರು ಪ್ರಕಾರದ ಮಲವ ಭುಂಜಿಸಿ,
ಸಂಸಾರ ವಿಷಯ ಕೂಪವೆಂಬುವ
ತಿಪ್ಪೆಯ ಗುಂಡಿಯ ನೀರಕುಡಿದು,
ಮಾಯಾ ಮೋಹವೆಂಬ ಹಾಳುಗೇರಿಯ ಗೊಟ್ಟಿನಲ್ಲಿ ಬಿದ್ದು,
ಸೂಕರನಂತಿಪ್ಪವರ ಎಂತು ಭಕ್ತರೆಂಬೆ?
ಎಂತು ದೇವರೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Āṇavamala māyāmala kārmikamalavemba
ī mūru malatrayaṅgaḷu.
Ondu kempina mala; ondu beḷḷina mala;
ondu kappina mala.
Ī mūru prakārada malava bhun̄jisi,
sansāra viṣaya kūpavembuva
tippeya guṇḍiya nīrakuḍidu,
māyā mōhavemba hāḷugēriya goṭṭinalli biddu,
sūkaranantippavara entu bhaktarembe?
Entu dēvarembenayya?
Mahāliṅgaguru śivasid'dhēśvara prabhuvē.