•  
  •  
  •  
  •  
Index   ವಚನ - 545    Search  
 
ಆಕಾರ ನಿರಾಕಾರವಿಲ್ಲದಂದು ಹಮ್ಮುಬಿಮ್ಮುಗಳಿಲ್ಲದಂದು ಜೀವ ಪರಮರಿಲ್ಲದಂದು ಮನ ಮನನ ಮನನೀಯವಿಲ್ಲದಂದು ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು ಘನಲಿಂಗವೆಂಬ ಪುರುಷತತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ವ ಸದಾಶಿವತತ್ವ ಮಾಹೇಶ್ವರತತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ವವಾಗಿಪ್ಪುದು. ಒಂದು ಸಕಲನಿಃಕಲತತ್ವವಾಗಿಪ್ಪುದು. ಒಂದು ಸಕಲತತ್ವವಾಗಿಪ್ಪುದು. ಶಿವತತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತೈದು ತೆರನಾಗಿಪ್ಪುದು. ಹೀಂಗೆ ಶಿವತತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ್ಮ, ಪರತತ್ವವೆಂಬ ಈ ಮೂರು ತತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್ ಶಕ್ತಿ. ಚಿತ್ ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ.ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ.ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು.ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೆಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ವವಿಪ್ಪತ್ತೈದು.ವಿದ್ಯಾತತ್ವ ಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷ್ಠೆ,ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ವಮೂವತ್ತೈದು ತೆರನು. ಇವೆಲ್ಲಾ ತತ್ವಂಗಳಿಗನುತ್ತರತತ್ವವಾಗಿ ಶಿವತತ್ವವೊಂದು. ಅಂತು ತತ್ವ ಮೂವತ್ತಾರು. ಅಂತು ಆತ್ಮತತ್ವ ವಿದ್ಯಾತತ್ವ ಶಿವತತ್ವವೆಂಬ ತ್ರೈ ತತ್ವ ಮೂವತ್ತಾರು ತೆರನು. ಈ ತತ್ವಂಗಳಲ್ಲಿಯೆ ತತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್ ಪದ ತತ್ವಂಪದ ಅಸಿಪದವೆಂದು ಮೂರು ತೆರನು. ತತ್ ಪದ ವೆಂದು ತೂರ್ಯನಾಮದ ಶಿವತತ್ವವು. ತ್ವಂ ಪದವೆಂದು ಇಪ್ಪತ್ತೈ ದು ತೆರನಾಗುತಂ ಇದ್ದಂಥಾ ಆತ್ಮತತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ವವು. ತತ್ ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ākāra nirākāravilladandu ham'mubim'mugaḷilladandu jīva paramarilladandu mana manana mananīyavilladandu śūn'ya niśūn'ya nāma nirnāma ivēnū illade baccabariya bayale sahajadinda gaṭṭigoṇḍu ghanaliṅgavemba puruṣatatvavāyittayya. Ā ghanaliṅgadinda cicchakti janisidaḷu. Ciccaktiyinda paraśakti puṭṭidaḷu. Paraśaktiyinda nāda bindu kaḷegaḷādavu. Akāravē nāda, ukāravē bindu, makāravē kaḷe. Intī trividhakke paraśaktiyē tāyi. Intī nālku ondādalli ōṅkāravāyittayya. Mundī praṇava tāne pan̄calakṣaṇavāyittu. Ā ghanaliṅgadindalē pan̄casādākhyamūrtigaḷāduvu. Ā cicchaktiyindalē pan̄caśaktiyarādaru. Ā pan̄caśaktiyarindalē pan̄cakalegaḷādavu. Ā pan̄calakṣaṇavuḷḷa mūrti tāne trayavāda bhēdava hēḷihenu. Adentendaḍe: Śivatatva sadāśivatatva māhēśvaratatvavendu mūruteranāgippudu. Bāhya niḥkalatatvavāgippudu. Ondu sakalaniḥkalatatvavāgippudu. Ondu sakalatatvavāgippudu. Śivatatva ēkamēva ondeyāgippudu. Sadāśivatatva aiduteranāgippudu. Māhēśvaratatva ippataidu teranāgippudu. Hīṅge śivatatva mūvattondu teranendarivudu. Sthūla, sūkṣma, paratatvavemba ī mūru tatvave ārāda bhēdamaṁ pēḷve. Adentendaḍe: Ā ghanaliṅgada sahasrānśadalli cit śakti. Cit śaktiya sahasrānśadinda paramēśvara. Paramēśvarana sahasrānśadinda paraśakti. Ā paraśaktiya sahasrānśadinda sadāśivanu. Ā sadāśivana sahasrānśadinda ādiśakti. Ādiśaktiya sahasrānśadinda īśvara. Ā īśvarana sahasrānśadinda icchāśakti. Icchāśaktiya sahasrānśadinda māhēśvara. Māhēśvarana sahasrānśadinda jñānaśakti. Ā jñānaśaktiya sahasrānśadinda rudranu. Ā rudrana sahasrānśadinda kriyāśakti. Ā kriyāśaktiya sahasrānśadinda īśān'yamūrtiyādanu. Hīṅge mūru āru teranāyittayya. Innī liṅgaṅgaḷige sarva lakṣaṇa sampūrṇava hēḷihenu. Adentendaḍe: Ondu mūrti sarvatōmukha sarvatōcakṣu, sarvatōbāhu, sarvatōpāda, sarvaparipūrṇanāgi Māṇikyavarṇada dhātuvinalli bhāvagamyavāgi opputippudu. Adarindalāda mūrtige ēka śiras'su, triṇētra, eraḍu hasta, eraḍu pāda. Min̄cinavarṇada dhātuvinalli jñānagamyavāgi opputippudu. Adarindalāda mūrtige eraḍu śiras'su, āru kaṅgaḷu, nālku bhuja, eraḍu pāda, suvarṇada dhātuvinalli manōgamyavāgi opputippudu. Adarindalāda mūrtige mūru mukha, ombattu kaṅgaḷu, āru bhuja, eraḍu pāda, śvētavarṇada dhātuvinalli ahaṅkāragamyavāgi opputippudu. Adarindalāda mūrtige Nālkumukha, hanneraḍu kaṅgaḷu, eṇṭu bhuja, eraḍu pāda, kuṅkumavarṇada dhātuvinalli bud'dhigamyavāgi opputippudu. Adarindalāda mūrtige pan̄camukha, daśabhuja, daśapan̄canētra, dvipāda, tanuyēka, śud'dhasphaṭikavarṇada dhātuvinalli cittagamyavāgi opputippudu. Nirākāravē sākāravāgi tōrittu. Sākāra nirākāravēkavembudanu svānubhāvadinda anubhāvake tandenayya. Idu tanninda tāne svayambhuvāda mūrtiyallade mattondarindādudalla. Inteseva śivana mukhadalli ogeda bhūtaṅgaḷāvavendaḍe: Sadyōjāta mukhadalli pr̥thvi.Vāmadēva mukhadalli appu. Aghōra mukhadalli agni.Tatpuruṣa mukhadalli vāyu. Īśān'ya mukhadalli ākāśa. Intudayavāda pan̄cabhūtaṅgaḷu pan̄cavinśatitatvavāda bhēdava hēḷihenu.Āvāvendare: Pr̥thvi appu tēja vāyu ākāśa intappa sthūlabhūtikavaidu. Prāṇa apāna vyāna udāna samānavendu vāyugaḷaidu. Vāku pāṇi pāda pāyu guhyavendu karmendriyaṅgaḷaidu. Śrōtra tvakku nētra jihve ghrāṇavendu bud'dhīndriyaṅgaḷaidu. Mana bud'dhi citta ahaṅkāravendu karaṇa catuṣṭaya nālku. Jīvanobbanu; antu ātmatatvavippattaidu.Vidyātatva hattu teranu. Adentendaḍe: Śāntātīta, śānti, vidye, pratiṣṭhe,nivr̥tti endu kalāśaktiyaraidu. Śivasādākhya amūrtisādākhya mūrtisādākhya kartr̥sādākhya karmasādākhyavendu śivādiyāda sādākhyamūrtigaḷaidu. Antu vidyātatva hattu teranu. Dvitīya tatvamūvattaidu teranu. Ivellā tatvaṅgaḷiganuttaratatvavāgi śivatatvavondu. Antu tatva mūvattāru. Antu ātmatatva vidyātatva śivatatvavemba trai tatva Mūvattāru teranu. Ī tatvaṅgaḷalliye tatvamasyādi vākyārtha kāṇalāyittu. Adu hēṅgendaḍe: Tat pada tatvampada asipadavendu mūru teranu. Tat pada vendu tūryanāmada śivatatvavu. Tvaṁ padavendu ippattai du teranāgutaṁ iddanthā ātmatatvavu. Asi padavendu hattu teranāgutaṁ iddanthā vidyātatvavu. Tat padavē liṅga, tvaṁ padavē aṅga, asi padavē liṅgāṅga sambandha. Ī trividha padavanoḷakoṇḍu nindudē paratatvavayyā, mahāliṅgaguru śivasid'dhēśvara prabhuvē.