ಅರ್ಪಿತ ಅವಧಾನದ ಕ್ರಮವ
ವಿಸ್ತರಿಸಿ ಒಪ್ಪವಿಟ್ಟು ಹೇಳಿಹೆ ಕೇಳಿರಣ್ಣ
ಭಿನ್ನಭೋಜನ ಪ್ರಸಾದಭೋಜನ ಸಹಭೋಜನವೆಂದು
ಲಿಂಗಾರ್ಪಿತ ಮೂರು ಪ್ರಕಾರವಾಗಿಪ್ಪುದು.
ಮುಂದಿಟ್ಟು ಸಕಲ ಪದಾರ್ಥವಂ ಇಷ್ಟಲಿಂಗಕ್ಕೆ ಕೊಟ್ಟು
ಆ ಲಿಂಗಮಂ ಸೆಜ್ಜೆಯರಮನೆಗೆ ಬಿಜಯಂಗೈಸಿ
ಅಂದಂದಿಂಗೆ ಬಂದ ಪದಾರ್ಥಮಂ
ಲಿಂಗಕ್ಕೆ ಕೊಡದೆ ಕೊಂಬುದೀಗ ಭಿನ್ನಭೋಜನ.
ಮುಂದಿಟ್ಟ ಸಕಲಪದಾರ್ಥಂಗಳು
ಲಿಂಗಕ್ಕೆ ಒಂದು ವೇಳೆ ಕೊಡದೆ
ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಆ ಭೋಜ್ಯಮಂ ಇಳುಹದೆ
ಕೊಂಬುದೀಗ ಪ್ರಸಾದಭೋಜನ.
ಮುಂದಿಟ್ಟು ಸಕಲಪದಾರ್ಥಂಗಳ
ಲಿಂಗಕ್ಕೆ ಮೊದಲು ಕೊಟ್ಟು
ಮತ್ತೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು
ಕೊಂಬುದೀಗ ಸಹಭೋಜನ.
ಇಂತೀ ತ್ರಿವಿಧ ಭೋಜನದ ಅಂತರಂಗದನ್ವಯವ
ನಿಮ್ಮ ಶರಣರೇ ಬಲ್ಲರಯ್ಯ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Transliteration Arpita avadhānada kramava
vistarisi oppaviṭṭu hēḷihe kēḷiraṇṇa
bhinnabhōjana prasādabhōjana sahabhōjanavendu
liṅgārpita mūru prakāravāgippudu.
Mundiṭṭu sakala padārthavaṁ iṣṭaliṅgakke koṭṭu
ā liṅgamaṁ sejjeyaramanege bijayaṅgaisi
andandiṅge banda padārthamaṁ
liṅgakke koḍade kombudīga bhinnabhōjana.
Mundiṭṭa sakalapadārthaṅgaḷu
liṅgakke ondu vēḷe koḍade
ettida bhōjyamaṁ liṅgakke koṭṭu ā bhōjyamaṁ iḷuhade
Kombudīga prasādabhōjana.
Mundiṭṭu sakalapadārthaṅgaḷa
liṅgakke modalu koṭṭu
matte ettida bhōjyamaṁ liṅgakke koṭṭu
kombudīga sahabhōjana.
Intī trividha bhōjanada antaraṅgadanvayava
nim'ma śaraṇarē ballarayya,
ghanaliṅgiya mōhada cennamallikārjuna.