ರೂಹಿಲ್ಲದ ನೆಳಲಿಂಗೆ ಮಳಲ ಬೊಂಬೆಯ ಮಾಡಿ,
ನಾದ ಬಿಂದುವಿನಲ್ಲಿ ಪುದಿಸಿ, ಆರಿಗೂ ಮೈದೋರದೆ
ಏಡಿಸಿ ಕಾಡಿತ್ತು ಶಿವನ ಮಾಯೆ.
ಕಾಯದ ಕಳವಳಕ್ಕೆ ಮುಂದೆ ರೂಪಾಗಿ ತೋರಿತ್ತಲ್ಲದೆ,
ಅದು ತನ್ನ ಗುಣವಲ್ಲದೆ [ಬೇರೆ] ತೋರುತ್ತಿಲ್ಲ.
ಅಂಗಭೋಗವನೆ ಕುಂದಿಸಿ ಪ್ರಸಾದವ ರುಚಿಸಿಹೆನೆಂಬ
ಲಿಂಗವಂತರೆಲ್ಲರೂ ಅರೆವೆಣಗಳಾಗಿ ಹೋದರು.
ಅಂಗಭೋಗವೆ ಲಿಂಗಭೋಗ, ಲಿಂಗಭೋಗವೆ ಅರ್ಪಿತ.
"ಸ್ವಕೀಯಃ ಪಾಕಸಂಬಂಧೀ ಭೋಗೋ ಜಂಗಮವರ್ಜಿತಃ|
ನಾಸ್ತಿ ಲಿಂಗಾರ್ಚನಂ ಚೈವ ಪ್ರಸಾದೋ ನಿಷ್ಫಲೋ ಭವೇತ್"||
ಲಿಂಗಕ್ಕೆಂದು ಬಂದ ರುಚಿ ಜಂಗಮಕ್ಕೆ ಬಾರದಿದ್ದಡೆ,
ಜಂಗಮಕ್ಕೆಂದು ಬಂದ ರುಚಿ ಲಿಂಗಕ್ಕೆ ಬಾರದಿದ್ದಡೆ.
ಲಿಂಗಜಂಗಮಭರಿತವರಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಯ್ಯಾ
ಪಾಕಸಂಬಂಧಿಗೆ ಪ್ರಸಾದ ದೂರ.
Transliteration Rūhillada neḷaliṅge maḷala bombeya māḍi,
nāda binduvinalli pudisi, ārigū maidōrade
ēḍisi kāḍittu śivana māye.
Kāyada kaḷavaḷakke munde rūpāgi tōrittallade,
adu tanna guṇavallade [bēre] tōruttilla.
Aṅgabhōgavane kundisi prasādava rucisihenemba
liṅgavantarellarū areveṇagaḷāgi hōdaru.
Aṅgabhōgave liṅgabhōga, liṅgabhōgave arpita.
Svakīyaḥ pākasambandhī bhōgō jaṅgamavarjitaḥ| Nāsti liṅgārcanaṁ caiva prasādō niṣphalō bhavēt||
liṅgakkendu banda ruci jaṅgamakke bāradiddaḍe,
jaṅgamakkendu banda ruci liṅgakke bāradiddaḍe.
Liṅgajaṅgamabharitavarilla.
Idu kāraṇa, kūḍalacennasaṅgayyā
pākasambandhige prasāda dūra.