•  
  •  
  •  
  •  
Index   ವಚನ - 1247    Search  
 
ಜಂಗಮವೆಂದು ಪಾದಪ್ರಕ್ಷಾಲನವ ಮಾಡಿ, ಉನ್ನತಾಸನದಲ್ಲಿ ಮೂರ್ತಮಾಡಿಸಿ, ವಿಶ್ವಾಸದಿಂದ ಪಾದತೀರ್ಥವ ಪಡಕೊಂಡು- ಆ ಸಮಯದಲ್ಲಿ ಆ ಜಂಗಮದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ತೀರ್ಥವ ಬಿಡಲಾಗದು. ಅದೆಂತೆಂದಡೆ: ತಾ ಭಾವಿಸಲು ತೀರ್ಥವಾಯಿತ್ತು, ಆ ಭಾವವ ಬಿಟ್ಟಡೆ ಅದು ನೀರೆನಿಸಿತ್ತು. ಇದು ಸಕಲಮಾಹೇಶ್ವರರಿಗೂ ಸನ್ಮತ. ಶೀಲವ್ರತಿಗಳಾದಡೆ, ಪಾದೋದಕ ತ್ಯಾಗವ ಮಾಡುವುದಯ್ಯಾ. ಅದೆಂತೆಂದಡೆ: "ಪ್ರಕ್ಷಾಲಿತಂ ಚ ಪಾದಾಂಬು ಜಂಗಮೋ ಲಿಂಗವರ್ಜಿತಃ| ಪಾದೋದಕಂ ತ್ಯಜೇತ್ ಜ್ಞಾನೀ ಇದಂ ಮಾಹೇಶಸಮ್ಮತಮ್"|| ಆ ಸಮಯದಲ್ಲಿ ಲಿಂಗವಿದ್ದಡೆ, ಆ ತೀರ್ಥವ ಅರ್ಪಿಸಿ ಸಲಿಸುವುದು. ಬೇರೆ ತೀರ್ಥವ ಪಡಕೊಳಲಾಗದು, ಕೂಡಲಚೆನ್ನಸಂಗಯ್ಯಾ ನಿಮ್ಮಾಣೆ.
Transliteration Jaṅgamavendu pādaprakṣālanava māḍi, unnatāsanadalli mūrtamāḍisi, viśvāsadinda pādatīrthava paḍakoṇḍu- ā samayadalli ā jaṅgamadēvara sejjeyalli liṅgavilladiralu ā tīrthava biḍalāgadu. Adentendaḍe: Tā bhāvisalu tīrthavāyittu, ā bhāvava biṭṭaḍe adu nīrenisittu. Idu sakalamāhēśvararigū sanmata. Śīlavratigaḷādaḍe, pādōdaka tyāgava māḍuvudayyā. Adentendaḍe: Prakṣālitaṁ ca pādāmbu jaṅgamō liṅgavarjitaḥ| pādōdakaṁ tyajēt jñānī idaṁ māhēśasam'matam|| ā samayadalli liṅgaviddaḍe, ā tīrthava arpisi salisuvudu. Bēre tīrthava paḍakoḷalāgadu, kūḍalacennasaṅgayyā nim'māṇe.