•  
  •  
  •  
  •  
Index   ವಚನ - 1251    Search  
 
ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ ಕಾಯಪುರದ ಒಂದು ಪಟ್ಟಣವ ಸಾಧಿಸುವೆನೆಂಬರಿಗೆ ಸಾಧ್ಯವಿಲ್ಲ, ಭೇದಿಸುವೆನೆಂಬರಿಗೆ ಭೇದ್ಯವಲ್ಲ. ಮರಹು ಮಹಾಕತ್ತಲೆಗಳೆಂಬ [ಕ]ರಿಗಳು, ಕುಹಕವೆಂಬ ಕೊತ್ತಳ, ಮಹಾಪಾಶ ಉನ್ಮತ್ತ ಅಹಂಕಾರವೆಂಬುದೊಂದು ಆಳು ಕುದುರೆ ಇದನಾರು ಸಾಧಿಸಬಲ್ಲರಯ್ಯಾ? ಪ್ರಾಣಪಂಚಾಕ್ಷರಿಯನೆ ನಿರ್ಮಿಸಿಕೊಂಡು, ಹಿಂದಣ ಬೇರ ಕಟ್ಟೊರಿಸಿ ಕಿತ್ತು, ಮುಂದಣ ಭವಾಂಬುಧಿಯನೆಲ್ಲ ಬಿಟ್ಟು, ಮನವೆಂಬ ಬಿಲ್ಲಿಗೆ ತನುವೆಂಬ ಹೆದೆಯ ಮಾಡಿಕೊಂಡು, ಗುರುವೆಂಬ ಗುರಿಯ ನೋಡಿಕೊಂಡು, ಏಕಭಾವದಲ್ಲಿ ಎಸೆವುತ್ತಿರಲು ಭವಹರಿದು, ಕಾಲಕರ್ಮದ ಶಿರವರಿದು ಅಂಗವಿಕಾರವೆಂಬ ಅರಸು ಸತ್ತು, ಪಂಚಭೂತಗಳೆಲ್ಲ ಪ್ರಳಯಕ್ಕೊಳಗಾದವು. ಅಷ್ಟಮದಂಗಳು ನಷ್ಟವಾಯಿತ್ತು. ಕೋಟೆ ಕೋಳು ಹೋಯಿತ್ತು, ಪಟ್ಟಣ ಸಾಧ್ಯವಾಯಿತ್ತು. ಒಳಕೋಟೆಗೆ ಕಿಚ್ಚನ್ನಿಕ್ಕೆ, ಪೃಥ್ವಿ ವಿಶ್ವವೆಲ್ಲ ಬೆಂದು ಬೆಳಕಾಯಿತ್ತು. ಇಂತಪ್ಪ ಗುರು-ಲಿಂಗ-ಜಂಗಮಕ್ಕೆ ಸಮವಾಗಿ ಸಿಕ್ಕಿತ್ತು ಸಂಸಾರಬಯಲು, ಇಂತಪ್ಪ ಆ ಪ್ರಸಾದವನಾರು ಬಲ್ಲರೆಂದರೆ. ಪ್ರಭುವಿನ ಬಳಿಯ ಬಸವಣ್ಣಂಗಲ್ಲದೆ ಅಳವಡದು ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಕೂಡಲಚೆನ್ನಸಂಗಮದೇವಾ.
Transliteration Jambūdvīpa navakhaṇḍa sukṣētravemba kāyapurada ondu paṭṭaṇava sādhisuvenembarige sādhyavilla, bhēdisuvenembarige bhēdyavalla. Marahu mahākattalegaḷemba [ka]rigaḷu, kuhakavemba kottaḷa, mahāpāśa unmatta ahaṅkāravembudondu āḷu kudure idanāru sādhisaballarayyā? Prāṇapan̄cākṣariyane nirmisikoṇḍu, hindaṇa bēra kaṭṭorisi kittu, mundaṇa bhavāmbudhiyanella biṭṭu, manavemba billige tanuvemba hedeya māḍikoṇḍu, guruvemba guriya nōḍikoṇḍu, Ēkabhāvadalli esevuttiralu bhavaharidu, kālakarmada śiravaridu aṅgavikāravemba arasu sattu, pan̄cabhūtagaḷella praḷayakkoḷagādavu. Aṣṭamadaṅgaḷu naṣṭavāyittu. Kōṭe kōḷu hōyittu, paṭṭaṇa sādhyavāyittu. Oḷakōṭege kiccannikke, pr̥thvi viśvavella bendu beḷakāyittu. Intappa guru-liṅga-jaṅgamakke samavāgi sikkittu sansārabayalu, intappa ā prasādavanāru ballarendare. Prabhuvina baḷiya basavaṇṇaṅgallade aḷavaḍadu nim'māṇe, nim'ma pramatharāṇe kūḍalacennasaṅgamadēvā.