•  
  •  
  •  
  •  
Index   ವಚನ - 1538    Search  
 
ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು ಸಿಡಿಲು ಮಿಂಚು ಮುಗಿಲುಗಳಿಹವು. ಅದರಿಂದ ಮೇಲೆ ಒಂದು ಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು ಶುಕ್ರನಿಹನು. ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು [ಸಾವಿರ] ಯೋಜನದುದ್ದದಲು ಶನಿಯಿಹನು. ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು ಆದಿತ್ಯನಿಹನು. ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ ಐವತ್ತಾರು ಲಕ್ಷ ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು. ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು ನಕ್ಷತ್ರವಿಹವು. ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು [ಲಕ್ಷ] ಯೋಜನದುದ್ದದಲು ಸಕಲ ಮಹಾಋಷಿಗಳಿಹರು. ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ ಯೋಜನದುದ್ದದಲು ತ್ರಿವಿಧ ದೇವತೆಗಳಿಹರು. ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ ಯೋಜನದುದ್ದದಲು ದೇವರ್ಕಳಿಹರು. ಆ ದೇವರ್ಕಳಿಂದಂ ಮೇಲೆ ಎ೦ಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ ಯೋಜನದುದ್ದದಲು ದ್ವಾದಶಾದಿತ್ಯರಿಹರು. ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ ಎ೦ಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು. ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು. ಇಂತು-ಧರೆಯಿಂದಂ ಆಕಾಶ ಉಭಯಂ ಕೂಡಲು ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ ಯೋಜನದುದ್ದದಲು ಒಂದು ಮಹಾಲೋಕವಿಹುದು. ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ: ಪಾತಾಳಲೋಕ ದೇವರ ಕಟಿಯಲ್ಲಿಹುದು, ರಸಾತಳಲೋಕ ದೇವರ ಗುಹ್ಯದಲ್ಲಿಹುದು, ತಳಾತಳಲೋಕ ಊರುವಿನಲ್ಲಿಹುದು, ಸುತಳಲೋಕ ಜಾನುವಿನಲ್ಲಿಹುದು, ವಿತಳಲೋಕ ಜಂಘೆಯಲ್ಲಿಹುದು, ವಿತಳಲೋಕ ಪಾದೋರ್ಧ್ವದಲ್ಲಿಹುದು, ಆತಳಲೋಕ ಪಾದತಳದಲ್ಲಿಹುದು. ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ. ಭೂಲೋಕ ನಾಭಿಯಲ್ಲಿಹುದು, ಭುವರ್ಲೋಕ ಹೃದಯದಲ್ಲಿಹುದು, ಸ್ವರ್ಲೋಕ ಉರೋಮಧ್ಯದಲ್ಲಿಹುದು, ಮಹರ್ಲೋಕ ಕಂಠದಲ್ಲಿಹುದು, ಜನರ್ಲೋಕ ತಾಲವ್ಯದಲ್ಲಿಹುದು, ತಪರ್ಲೋಕ ಲಲಾಟದಲ್ಲಿಹುದು, ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು. ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ. ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು ಅಡಗಿಸಿಹೆನೆಂಬ ಅತುಳ ಬಲ್ಲಿದರು ಕೆಲಬರುಂಟೆ? ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ? ಅಡರಿ ಹಿಡಿಯಲುಬಹುದು ಭಕ್ತಿಯೆಂಬ ಭಾವದಲ್ಲಿ ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ ಮಾಯವನುಣ್ಣದೆ ಮನದಲ್ಲಿ ಅಜ್ಞಾನವ ಬೆರಸದೆ ಅಲ್ಲದುದನೆ ಬಿಟ್ಟು, ಬಲ್ಲುದನೆ ಲಿಂಗಾರ್ಚನೆಯೆಂದು `ಓಂ' ಎಂಬ ಅಕ್ಷರವನೋದಿ ಅರಿತ ಬಳಿಕ ಬಸುರಲ್ಲಿ ಬಂದಿಪ್ಪ, ಶಿರದಲ್ಲಿ ನಿಂದಿಪ್ಪ ಅಂಗೈಯೊಳಗೆ ಅಪ್ರತಿಮನಾಗಿ ಸಿಲ್ಕಿಪ್ಪ ಕಾಣಾ ಕೂಡಲಚೆನ್ನಸಂಗಮದೇವ.
Transliteration Dharege tombatteṇṭusāvira yōjanaduddadalu siḍilu min̄cu mugilugaḷihavu. Adarinda mēle ondu lakṣa yōjanaduddadalu br̥haspati ihanu. Ā br̥haspatiyinda mēle mūvatteraḍulakṣa yōjanaduddadalu śukranihanu. Ā śukraninda mēle aruvattunālku [sāvira] yōjanaduddadalu śaniyihanu. Ā śaniyinda mēle ondakōṭi ippatteṇṭulakṣa yōjanaduddalu ādityanihanu. Ā ādityaninda mēle eraḍukōṭiyuṁ aivattusāvira aivattāru lakṣa yōjanaduddadalu Rāhukētugaḷu pravartisikoṇḍ'̔ihavu. Allinda mēle aidukōṭiyuṁ hanneraḍulakṣa yōjanaduddadalu nakṣatravihavu. Ā nakṣatraṅgaḷinda mēle hattukōṭiyuṁ ippattunālku [lakṣa] yōjanaduddadalu sakala mahā'r̥ṣigaḷiharu. Ā r̥ṣigaḷinda mēle ippattukōṭiyuṁ nālvatteṇṭulakṣa yōjanaduddadalu trividha dēvategaḷiharu. Ā trividha dēvategaḷindaṁ mēle nālvattukōṭiyuṁ tombattārulakṣa yōjanaduddadalu dēvarkaḷiharu. Ā dēvarkaḷindaṁ mēle e0battondukōṭiyuṁ tombatteraḍulakṣa Yōjanaduddadalu dvādaśādityariharu. Ā dvādaśādityarindaṁ mēle nūraruvattumūrukōṭiyuṁ e0battunālkulakṣa yōjanaduddadalu mahāsēnariharu. Ā mahāsēnarindaṁ mēle munnūrippattēḷukōṭiyuṁ aravatteṇṭulakṣa yōjanaduddadalu kr̥taremba mahāmunigaḷiharu. Intu-dhareyindaṁ ākāśa ubhayaṁ kūḍalu ārunūraivattaidu kōṭi aidu lakṣa tombatteṇṭu sāvira yōjanaduddadalu ondu mahālōkavihudu. Ā lōkadinda hadinālku lōkavuṇṭu. Avu ellihavendaḍe: Pātāḷalōka dēvara kaṭiyallihudu, rasātaḷalōka dēvara guhyadallihudu, taḷātaḷalōka ūruvinallihudu, sutaḷalōka jānuvinallihudu, vitaḷalōka jaṅgheyallihudu, vitaḷalōka pādōrdhvadallihudu, ātaḷalōka pādataḷadallihudu. Allindatta keḷaguḷḷa lōkavanātane balla. Bhūlōka nābhiyallihudu, bhuvarlōka hr̥dayadallihudu, svarlōka urōmadhyadallihudu, maharlōka kaṇṭhadallihudu, Janarlōka tālavyadallihudu, taparlōka lalāṭadallihudu, satyalōka brahmarandhradallihudu. Allindatta mēluḷḷa lōkavanātane balla. Intī īrēḷu lōkavu tāneyāgippa mahāliṅgavannu aḍagisihenemba atuḷa ballidaru kelabaruṇṭe? Aḍaguvanu mattondu pariyalli, adu hēṅge? Aḍari hiḍiyalubahudu bhaktiyemba bhāvadalli satyasadācāravanaridu pāpakke nillade kōpakke sallade Māyavanuṇṇade manadalli ajñānava berasade alladudane biṭṭu, balludane liṅgārcaneyendu `ōṁ' emba akṣaravanōdi arita baḷika basuralli bandippa, śiradalli nindippa aṅgaiyoḷage apratimanāgi silkippa kāṇā kūḍalacennasaṅgamadēva.