ವೀರಶೈವಸಂಪನ್ನರಾದ ಸದ್ಭಕ್ತ
ಶರಣಗಣಂಗಳಾದಡೆಯೂ
ವೀರಮಾಹೇಶ್ವರರಾದಡೆಯೂ
ಕ್ರಿಯಾಪಾದೋದಕ ಮಾಡಬೇಕಾದಡೆ,
ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ
ಅಂಗುಷ್ಠ ಎಂಟು ಅಂಗುಲಗಳಲ್ಲಿ
ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ
ಮೂರು ವೇಳೆ ಸ್ಪರ್ಶನವ ಮಾಡಿ,
ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು
ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ
ಗುರುಪಾದೋದಕವೆನಿಸುವುದು.
ಇದೇ ರೀತಿಯಲ್ಲಿ ಎಡದ ಪಾದವ
ಮಾಡಿದಡೆ ಲಿಂಗೋದಕವೆನಿಸುವುದು.
ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.
ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ
ಸ್ಪರ್ಶನೋದಕವೆನಿಸುವುದು.
ಆ ಪಾದದ ಮೇಲಣ ದ್ರವವ ತೆಗೆದಂತಹದೆ
ಅವಧಾನೋದಕವೆನಿಸುವುದು.
ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು
ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು.
ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.
ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು
ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ನಾಮೋದಕವೆನಿಸುವುದು.
ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು
ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು.
ಬಟ್ಟಲಿನಲ್ಲಿರುವ ತೀರ್ಥವನ್ನು ಸೇವಿಸುವುದು
ತೃಪ್ತಿಯ ಪರಿಣಾಮವಾದ ಪರಿಣಾಮೋದಕವೆನಿಸುವುದು.
ಈ ಪ್ರಕಾರದಲ್ಲಿ ಹತ್ತು ಪಾದೋದಕವು,
ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು.
ಆಚರಿಸಲಾಗದೆಂಬ ಹುಚ್ಚಮಾನವರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ.
Transliteration Vīraśaivasampannarāda sadbhakta
śaraṇagaṇaṅgaḷādaḍeyū
vīramāhēśvararādaḍeyū
kriyāpādōdaka māḍabēkādaḍe,
tanna eraḍu aṅgulagaḷinda, ā māhēśvarara
aṅguṣṭha eṇṭu aṅgulagaḷalli
tarjani beraḷininda balada pādāṅguṣṭhada mēle
mūru vēḷe sparśanava māḍi,
nālkaneya vēḷege adē balapādada nālku
beraḷugaḷannu ondu vēḷe sparśana māḍidaḍe
gurupādōdakavenisuvudu.
Idē rītiyalli eḍada pādava
māḍidaḍe liṅgōdakavenisuvudu.
Ī eraḍara kūṭave jaṅgamapādōdakavenisuvudu.
Tanna hastadinda pādava muṭṭi māḍidantahade
sparśanōdakavenisuvudu.
Ā pādada mēlaṇa dravava tegedantahade
avadhānōdakavenisuvudu.
Adara mēlaṇa apēkṣe mundugoṇḍu tānu
māḍikoṇḍantahade apyāyanōdakavenisuvudu.
Hastadinda muṭṭi māḍidantahade hastōdakavenisuvudu.
Ā bhājanava tanna kaiyalli tegedukoṇḍu
ā jaṅgamakke namaskarisuvantahade nirnāmōdakavenisuvudu.
Ā jaṅgamakke namaskarisi ā bhājanavannu
tanna kriyege iṭṭukoṇḍantahude satyōdakavenisuvudu.
Baṭṭalinalliruva tīrthavannu sēvisuvudu
tr̥ptiya pariṇāmavāda pariṇāmōdakavenisuvudu.
Ī prakāradalli hattu pādōdakavu,
śikṣāpādōdakadalli āguvudendu aridu ācarisuvudu.
Ācarisalāgademba huccamānavaranēnembenayyā
kūḍalacennasaṅgamadēvā.