ಶರಣು ಶರಣಾರ್ಥಿ ಮಹಾದೇವಾ,
ಶರಣು ಶರಣಾರ್ಥಿ ಪರಬ್ರಹ್ಮಸ್ವರೂಪಾ,
ಶರಣು ಶರಣಾರ್ಥಿ ನಿರಾಕಾರತತ್ತ್ವವೆ,
ನೀವೆ ಗತಿ ನಿಮ್ಮ ಚರಣಕ್ಕೆ ಶರಣಯ್ಯಾ ಪ್ರಭುವೆ.
ಸತಿಪತಿಯ ಒಲುಮೆಯ ಮುನಿಸು,
ಅತಿಬೇಟವೆಂಬುದು ತಪ್ಪದು ನೋಡಾ.
ನಿಮ್ಮ ಶರಣ ಬಸವಣ್ಣನೊಡತಣ ಮುನಿಸು
ಎನ್ನ ಮನಕ್ಕೆ ಸಂಶಯ ತೋರದು ನೋಡಾ.
ಸಂತೆಯ ನೆರವಿಯಲ್ಲಿ ಅಭಿಮಾನದ
ಮಾತ ಮಾರಬಹುದೆ?
ಬೀದಿಯಲ್ಲಿ ನಿಂದು ನುಡಿವ
ಅನುಭಾವದ ರಚ್ಚೆ ನಗೆಗೆಡೆ ನೋಡಯ್ಯಾ.
ಸಂಗನಬಸವಣ್ಣನೊಳಗೆ ನಿಮ್ಮೊಳಗೆ
ಭೇದವಿಲ್ಲೆಂಬುದ ನೀವೆ ಅರಿದರಿದು;
ಮತ್ತೆ ಬಾರೆವೆಂಬುದುಚಿತವೆ?
ಕೂಡಲಚೆನ್ನಸಂಗನ ಶರಣ ಬಸವಣ್ಣನೆ
ನಿಮ್ಮ ಪ್ರಾಣವಾಗಿರಲು
ಇನ್ನಾರೊಡನೆ ಮುನಿವಿರಿ?
ಕೃಪೆ ಮಾಡಾ ಪ್ರಭುವೆ.
Transliteration Śaraṇu śaraṇārthi mahādēvā,
śaraṇu śaraṇārthi parabrahmasvarūpā,
śaraṇu śaraṇārthi nirākāratattvave,
nīve gati nim'ma caraṇakke śaraṇayyā prabhuve.
Satipatiya olumeya munisu,
atibēṭavembudu tappadu nōḍā.
Nim'ma śaraṇa basavaṇṇanoḍataṇa munisu
enna manakke sanśaya tōradu nōḍā.
Santeya neraviyalli abhimānada
māta mārabahude?
Bīdiyalli nindu nuḍiva
anubhāvada racce nagegeḍe nōḍayyā.
Saṅganabasavaṇṇanoḷage nim'moḷage
bhēdavillembuda nīve aridaridu;
matte bārevembuducitave?
Kūḍalacennasaṅgana śaraṇa basavaṇṇane
nim'ma prāṇavāgiralu
innāroḍane muniviri?
Kr̥pe māḍā prabhuve.