ಶ್ರೀಗುರುಕರುಣವೆ ಲಿಂಗ,
ಶ್ರೀಲಿಂಗದ ನಿಜವೆ ಜಂಗಮ,
ಇಂತಿದು ಬಹಿರಂಗದ ವರ್ತನೆ.
ಇನ್ನು- ಅಂತರಂಗದ ಸುಜ್ಞಾನವೆ ಜಂಗಮ,
ಆ ಜಂಗಮದ ನಡೆವ ಸತ್ಕ್ರಿಯೆ ಲಿಂಗ,
ಆ ಉಭಯದ ಏಕತ್ವದ ಸಿದ್ಧಿಯೆ ಗುರು.
ಇದು ಕಾರಣ- ಅಂಗತ್ರಯದಲ್ಲಿ
ಲಿಂಗತ್ರಯ ಸಂಗಮವಾದಲ್ಲಿ,
ಜಂಗಮದಾಸೋಹವಿಲ್ಲದಡೆ ತೃಪ್ತಿಯಿಲ್ಲ.
ಅಂಗದ ಮೇಲೆ ಲಿಂಗವಿಲ್ಲದಿರ್ದಡೆ
ಜಂಗಮ ಸೇವೆಯ ಕೈಕೊಳ್ಳ.
ಅದು ಕಾರಣ- ಒಂದ ಬಿಟ್ಟು ಒಂದರಲ್ಲಿ ನಿಂದಡೆ,
ಅಂಗವಿಲ್ಲದ ಆತ್ಮನಂತೆ, ಶಕ್ತಿಯಿಲ್ಲದ ಶಿವನಂತೆ,
ದೀಪವಿಲ್ಲದ ಪ್ರಕಾಶದಂತೆ!
ಒಂದಂಗ ಶೂನ್ಯವಾಗಿ ಭಕ್ತಿಯುಂಟೆ?
ಅವಯವಹೀನನು ರಾಜಪಟ್ಟಕ್ಕೆ ಸಲುವನೆ?
ಲಿಂಗಹೀನನು ಭೃತ್ಯಾಚಾರಕ್ಕೆ ಸಲುವನೆ?
ಅದು ದೇವತ್ವಕ್ಕೆ ಸಲ್ಲದು.
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ತ್ರಿವಿಧಸನ್ಮತವೆ ಚರಸೇವೆಯಯ್ಯಾ.
Transliteration Śrīgurukaruṇave liṅga,
śrīliṅgada nijave jaṅgama,
intidu bahiraṅgada vartane.
Innu- antaraṅgada sujñānave jaṅgama,
ā jaṅgamada naḍeva satkriye liṅga,
ā ubhayada ēkatvada sid'dhiye guru.
Idu kāraṇa- aṅgatrayadalli
liṅgatraya saṅgamavādalli,
jaṅgamadāsōhavilladaḍe tr̥ptiyilla.
Aṅgada mēle liṅgavilladirdaḍe
jaṅgama sēveya kaikoḷḷa.
Adu kāraṇa- onda biṭṭu ondaralli nindaḍe,
aṅgavillada ātmanante, śaktiyillada śivanante,
Dīpavillada prakāśadante!
Ondaṅga śūn'yavāgi bhaktiyuṇṭe?
Avayavahīnanu rājapaṭṭakke saluvane?
Liṅgahīnanu bhr̥tyācārakke saluvane?
Adu dēvatvakke salladu.
Nam'ma kūḍalacennasaṅgayyanalli
trividhasanmatave carasēveyayyā.