ಸತ್ಯಕಾಯಕ ಸತ್ಯಕಾಯಕವೆಂದು ನುಡಿವಿರಿ,
ಸತ್ಯಕಾಯಕವಾವುದೆಂದರಿಯಿರಿ
ಭಕ್ತಗೃಹಂಗಳಿಗೆ ಭೃತ್ಯಕಾಯಕವನೊಡಗೊಂಡು ಹೋಗಿ
ಆ ಭಕ್ತರಿಗೆ ತಾನು ಭೃತ್ಯನಾಗಿ ಶರಣೆಂದು,
ತನ್ನ ಕಾಯಕವನೊಪ್ಪಿಸಿ
ಪದಾರ್ಥಂಗಳನು ಪಡೆವಲ್ಲಿ ಭಕ್ತಿ ಬಂಧನವಿಲ್ಲದೆ,
ಆ ಭಕ್ತನ ಮನವ ನೋಯಿಸದೆ,
ಭಕ್ತಿಮಹೋತ್ಸಾಹದಿಂದ ಬಂದ ಪದಾರ್ಥಂಗಳನು ತಂದು
ಲಿಂಗಜಂಗಮಕ್ಕೆ ನೀಡಿ,
ಅವರೊಕ್ಕುದ ಕೊಂಡಿಪ್ಪುದೆ ಸತ್ಯಕಾಯಕ, ಆತನೆ ಸದ್ಭಕ್ತ.
ಇನಿತಲ್ಲದೆ ಲಿಂಗಜಂಗಮಕ್ಕೆ ಸಲುವುದೆಂದು ಭಕ್ತನ ಬಂಧನಕಿಕ್ಕಿ
ಭಕ್ತಿಯ ಮನೋತ್ಸಾಹಗುಂದಿಸಿ,
ಅಸುರಕರ್ಮದಿಂದ ತಂದ ದ್ರವ್ಯಂಗಳೆಲ್ಲವು
ಅಸ್ಥಿ ಮಾಂಸ ಚರ್ಮಂಗಳೆನಿಸುವುದಲ್ಲದೆ ಅವು ಪದಾರ್ಥಂಗಳಲ್ಲ.
ಅದು ಲಿಂಗಜಂಗಮಕ್ಕೆ ಸಲ್ಲದು, ಅವಂಗೆ ಪ್ರಸಾದವಿಲ್ಲ.
ಅದು ಸತ್ಯಕಾಯಕಕ್ಕೆ ಸಲ್ಲದು.
ಅವ ರಾಕ್ಷಸನಪ್ಪನಲ್ಲದೆ ಭಕ್ತನಲ್ಲ.
ಅವನ ಮನೆಯ ಹೊಕ್ಕು ಲಿಂಗಾರ್ಚನೆಯ ಮಾಡುವಾತ
ಜಂಗಮಸ್ಥಲಕ್ಕೆ ಸಲ್ಲ.
ಅವರೀರ್ವರನು ಕೂಡಲಚೆನ್ನಸಂಗಯ್ಯ
ಇಪ್ಪತ್ತೆಂಟುಕೋಟಿ ನಾಯಕನರಕದಲ್ಲಿಕ್ಕುವ.
Transliteration Satyakāyaka satyakāyakavendu nuḍiviri,
satyakāyakavāvudendariyiri
bhaktagr̥haṅgaḷige bhr̥tyakāyakavanoḍagoṇḍu hōgi
ā bhaktarige tānu bhr̥tyanāgi śaraṇendu,
tanna kāyakavanoppisi
padārthaṅgaḷanu paḍevalli bhakti bandhanavillade,
ā bhaktana manava nōyisade,
bhaktimahōtsāhadinda banda padārthaṅgaḷanu tandu
liṅgajaṅgamakke nīḍi,
avarokkuda koṇḍippude satyakāyaka, ātane sadbhakta.
Initallade liṅgajaṅgamakke saluvudendu bhaktana bandhanakikki
bhaktiya manōtsāhagundisi,
asurakarmadinda tanda dravyaṅgaḷellavu
Asthi mānsa carmaṅgaḷenisuvudallade avu padārthaṅgaḷalla.
Adu liṅgajaṅgamakke salladu, avaṅge prasādavilla.
Adu satyakāyakakke salladu.
Ava rākṣasanappanallade bhaktanalla.
Avana maneya hokku liṅgārcaneya māḍuvāta
jaṅgamasthalakke salla.
Avarīrvaranu kūḍalacennasaṅgayya
ippatteṇṭukōṭi nāyakanarakadallikkuva.