ಸಹಜದಿಂದ ನಿರಾಲಂಬವಾಯಿತ್ತು,
ನಿರಾಲಂಬದಿಂದ ನಿರವಯವಾಯಿತ್ತು.
ನಿರವಯದಿಂದ ನಿರಾಕಾರವಾಯಿತ್ತು,
ನಿರಾಕಾರದಿಂದ ಆದಿಯಾಯಿತ್ತು.
ಆದಿಯಲೊಬ್ಬ ಮೂರ್ತಿಯಾದ,
ಆ ಮೂರ್ತಿಯಿಂದ ಸದಾಶಿವನಾದ.
ಆ ಸದಾಶಿವನಮೂರ್ತಿಯಿಂದ ಜ್ಞಾನಶಕ್ತಿಯಾದಳು.
ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ,
ಆ ಶಿವಂಗೆ ಇಚ್ಛಾಶಕ್ತಿಯಾದಳು.
ಆ ಶಿವಂಗೆಯೂ ಇಚ್ಛಾಶಕ್ತಿಯರಿಬ್ಬರಿಗೆಯೂ ರುದ್ರನಾದ.
ಆ ರುದ್ರಂಗೆ ಕ್ರಿಯಾಶಕ್ತಿಯಾದಳು.
ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ.
ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು.
ಆ ವಿಷ್ಣುವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯಾದಳು.
ಆ ಬ್ರಹ್ಮಂಗೆಯೂ ಸರಸ್ವತಿಯಿಬ್ಬರಿಗೆಯೂ
ನರರು ಸುರರು ದೇವರ್ಕಳು ಹೆಣ್ಣು ಗಂಡು
ಸಚರಾಚರಂಗಳು ಸಹಿತವಾಗಿ ಎಂಬತ್ತುನಾಲ್ಕುಲಕ್ಷ
ಜೀವಜಂತುಗಳು ತೋರುವ ತೋರಿಕೆಯೆಲ್ಲ ಹುಟ್ಟಿತ್ತು,
ಕಾಣಾ ಕೂಡಲಚೆನ್ನಸಂಗಮದೇವಾ.
Transliteration Sahajadinda nirālambavāyittu,
nirālambadinda niravayavāyittu.
Niravayadinda nirākāravāyittu,
nirākāradinda ādiyāyittu.
Ādiyalobba mūrtiyāda,
ā mūrtiyinda sadāśivanāda.
Ā sadāśivanamūrtiyinda jñānaśaktiyādaḷu.
Ā sadāśivaṅgeyū jñānaśaktiyibbarigeyū śivanāda,
ā śivaṅge icchāśaktiyādaḷu.
Ā śivaṅgeyū icchāśaktiyaribbarigeyū rudranāda.
Ā rudraṅge kriyāśaktiyādaḷu.
Ā rudraṅgeyū kriyāśaktiyibbarigeyū viṣṇuvāda.
Ā viṣṇuviṅge mahālakṣmiyādaḷu.
Ā viṣṇuviṅgeyū mahālakṣmiyibbarigeyū brahmanāda.
Ā brahmaṅge sarasvatiyādaḷu.
Ā brahmaṅgeyū sarasvatiyibbarigeyū
nararu suraru dēvarkaḷu heṇṇu gaṇḍu
sacarācaraṅgaḷu sahitavāgi embattunālkulakṣa
jīvajantugaḷu tōruva tōrikeyella huṭṭittu,
kāṇā kūḍalacennasaṅgamadēvā.