ಹುಸಿಯುಳ್ಳವ ಭಕ್ತನಲ್ಲ,
ವಿಷಯವುಳ್ಳವ ಮಾಹೇಶ್ವರನಲ್ಲ,
ಆಸೆಯುಳ್ಳವ ಪ್ರಸಾದಿಯಲ್ಲ,
ಜೀವಗುಣವುಳ್ಳವ ಪ್ರಾಣಲಿಂಗಿಯಲ್ಲ,
ತನುಗುಣವುಳ್ಳವ ಶರಣನಲ್ಲ,
ಜನನಮರಣವುಳ್ಳವ ಐಕ್ಯನಲ್ಲ.
ಈ ಆರರ ಅರಿವಿನ ಅರ್ಕದ
ಸಂಪತ್ತಿನ ಭೋಗ ಹಿಂಗಿದಡೆ
ಸ್ವಯಂ ಜಾತನೆಂಬೆ. ಆ ದೇಹ ನಿಜದೇಹವೆಂಬೆ.
ಆ ನಿಜದೇಹ ಇರಿದರರಿಯದು, ತರಿದರರಿಯದು,
ಹೊಯ್ದರರಿಯದು, ಬಯ್ದರರಿಯದು,
ಸ್ತುತಿಸಿದರರಿಯದು, ನಿಂದಿಸಿದರರಿಯದು,
ಪುಣ್ಯವನರಿಯದು, ಪಾಪವನರಿಯದು,
ಸುಖವನರಿಯದು, ದುಃಖವನರಿಯದು,
ಕಾಲವನರಿಯದು, ಕರ್ಮವನರಿಯದು,
ಜನನವನರಿಯದು, ಮರಣವನರಿಯದು-
ಇಂತೀ ಷಡುಸ್ಥಲದೊಳಗೆ ತಾ ಒಂದು ನಿಜವಿಲ್ಲವಾಗಿ,
ನಾವು ಹಿರಿಯರು ನಾವು ಗುರುಗಳು
ನಾವು ಸಕಲಶಾಸ್ತ್ರಸಂಪನ್ನ ಷಡುಸ್ಥಲದ ಜ್ಞಾನಿಗಳು
ಎಂಬ ಮೂಕೊರೆಯರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ?
ಕುತ್ತಗೆಯುದ್ದ ಹೂಳಿಸಿಕೊಂಡು
ಮುಗಿಲುದ್ದಕ್ಕೆ ಹಾರಲುಂಟೆ?
Transliteration Husiyuḷḷava bhaktanalla,
viṣayavuḷḷava māhēśvaranalla,
āseyuḷḷava prasādiyalla,
jīvaguṇavuḷḷava prāṇaliṅgiyalla,
tanuguṇavuḷḷava śaraṇanalla,
jananamaraṇavuḷḷava aikyanalla.
Ī ārara arivina arkada
sampattina bhōga hiṅgidaḍe
svayaṁ jātanembe. Ā dēha nijadēhavembe.
Ā nijadēha iridarariyadu, taridarariyadu,
hoydarariyadu, baydarariyadu,
stutisidarariyadu, nindisidarariyadu,
Puṇyavanariyadu, pāpavanariyadu,
sukhavanariyadu, duḥkhavanariyadu,
kālavanariyadu, karmavanariyadu,
jananavanariyadu, maraṇavanariyadu-
intī ṣaḍusthaladoḷage tā ondu nijavillavāgi,
nāvu hiriyaru nāvu gurugaḷu
nāvu sakalaśāstrasampanna ṣaḍusthalada jñānigaḷu
emba mūkoreyara meccuvane
kūḍalacennasaṅgamadēva?
Kuttageyudda hūḷisikoṇḍu
mugiluddakke hāraluṇṭe?