ಎಲ್ಲಾ ವ್ರತಕ್ಕೂ ಜಂಗಮದ ಪ್ರಸಾದವೆ ಪ್ರಾಣ.
ಎಲ್ಲಾ ನೇಮಕ್ಕೂ ಜಂಗಮ ದರ್ಶನವೆ ನೇಮ.
ಎಲ್ಲಾ ಶೀಲಕ್ಕೂ ಜಂಗಮಮಾಟವೆ ಶೀಲ.
ಇಂತೀ ವ್ರತ ನೇಮ ಶೀಲಂಗಳೆಲ್ಲವೂ
ಜಂಗಮದ ಮುಂದಿಟ್ಟು ಶುದ್ಧತೆಯಹ ಕಾರಣ
ಆ ಜಂಗಮದಲ್ಲಿ ಅರ್ಥ ಪ್ರಾಣ ಅಭಿಮಾನಕ್ಕೆ
ಕಟ್ಟುಮಾಡಿದೆನಾದಡೆ ಎನಗದೆ ದ್ರೋಹ.
ಆ ಜಂಗಮದ ದರ್ಶನದಿಂದ ಸಕಲ ದ್ರವ್ಯ ಪವಿತ್ರ.
ಆ ಜಂಗಮದ ಪಾದತೀರ್ಥದಿಂದ ಘನಲಿಂಗಕ್ಕೆ ಜೀವಕಳೆ.
ಆ ಜಂಗಮದ ಪ್ರಸಾದದಿಂದ ಘನಲಿಂಗಕ್ಕೆ ತೃಪ್ತಿ.
ಇಷ್ಟನರಿತಲ್ಲಿ ಜಂಗಮಲಿಂಗಕ್ಕೆ ಸಂದೇಹ ಮಾಡಿದಡೆ
ಎನಗೆ ಕುಂಭೀಪಾತಕದಲ್ಲಿ ನಾಯಕನರಕ ತಪ್ಪದು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿ ಮುಳುಗುವೆನು.
Transliteration Ellā vratakkū jaṅgamada prasādave prāṇa.
Ellā nēmakkū jaṅgama darśanave nēma.
Ellā śīlakkū jaṅgamamāṭave śīla.
Intī vrata nēma śīlaṅgaḷellavū
jaṅgamada mundiṭṭu śud'dhateyaha kāraṇa
ā jaṅgamadalli artha prāṇa abhimānakke
kaṭṭumāḍidenādaḍe enagade drōha.
Ā jaṅgamada darśanadinda sakala dravya pavitra.
Ā jaṅgamada pādatīrthadinda ghanaliṅgakke jīvakaḷe.
Ā jaṅgamada prasādadinda ghanaliṅgakke tr̥pti.
Iṣṭanaritalli jaṅgamaliṅgakke sandēha māḍidaḍe
enage kumbhīpātakadalli nāyakanaraka tappadu.
Ācārave prāṇavāda rāmēśvaraliṅga sahitāgi muḷuguvenu.