ಬಸವಣ್ಣ   
  ವಚನ - 392     
 
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ: ಮೀನಜ, ರೋಮಜ ಮಹಾಮುನಿಗಳ ಲಯವ ಮಾಡಿದುದ ನಾ ಬಲ್ಲೆನಾಗಿ, ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ: ನವಕೋಟಿ ಬ್ರಹ್ಮರಿಗೆ ಪ್ರಳಯವ ಮಾಡುವುದ ನಾ ಬಲ್ಲೆನಾಗಿ. ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ: ದಶಕೋಟಿ ನಾರಾಯಣರಿಗೆ ಮರಣವ ಮಾಡುವುದ ನಾ ಬಲ್ಲೆನಾಗಿ, ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ: ಅನಂತಕೋಟಿ ರುದ್ರರಿಗೆ ಲಯವ ಮಾಡುವುದ ನಾ ಬಲ್ಲೆನಾಗಿ. ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ! ಎನ್ನನೇಳೇಳು ಭವಕ್ಕೆ ತಂದಲ್ಲಿ ಅನುಭವ ಲಿಂಗ ಜಂಗಮದ ಮೊರೆಹೊಕ್ಕು ಭವಂ ನಾಸ್ತಿಯಾಗಿ ಬದುಕಿದೆನಯ್ಯಾ, ಕೂಡಲಸಂಗಮದೇವಾ.