ಬಸವಣ್ಣ   
  ವಚನ - 397     
 
ಜಂಗಮದ ಸನ್ನಿಧಿಯಲ್ಲಿ ನಾನು ವಾಹನವನೇರಲಮ್ಮೆ; ಏರಿದರೆ ಭವ ಹಿಂಗದು, ಅದೇನು ಕಾರಣ: ಮುಂದೆ ಶೂಲವನೇರುವ ಪ್ರಾಪ್ತಿಯುಂಟಾದ ಕಾರಣ, ಜಂಗಮ ಬರಲಾಸನದಲ್ಲಿರಲಮ್ಮೆ: ಇದ್ದರೆ ಭವ ಹಿಂಗದು! ಏನು ಕಾರಣ: ಮುಂದೆ ಕಾಯ್ದಿಟ್ಟಿಗೆಯ ಮೇಲೆ ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ. ಜಂಗಮದ ಮುಂದೆ ದಿಟ್ಟತನದಲ್ಲಿ ಬೆರೆತು ನಿಂದಿರಲಮ್ಮೆನು: ನಿಂದರೆ ಭವ ಹಿಂಗದಾಗಿ! ಏನು ಕಾರಣ! ಮುಂದೆ ಹೆಡಗುಡಿಯ ಕಟ್ಟಿ ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ! ಇಂತೀ ಬಾಧೆ ಭವಂಗಳಿಗಂಜುವೆನಯ್ಯಾ. ನಿನ್ನವರ ಸುಳುಹು ನೀನೆಂದೇ ಭಾವಿಸಿ ತೊತ್ತು-ಭೃತ್ಯನಾಗಿಪ್ಪೆನಯ್ಯಾ, ಕೂಡಲಸಂಗಮದೇವಾ.