ಬಸವಣ್ಣ   
  ವಚನ - 505     
 
ಸಂಸಾರವೆಂಬ ಶ್ವಾನನಟ್ಟಿ, ಮೀಸಲ ಬೀಸರ ಮಾಡದಿರಯ್ಯಾ. ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ. ನೀವಲ್ಲದೆ ಮತ್ತೇನನೂ ಅರಿಯನು. ಕನ್ಯೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು, ಮನ್ನಿಸು, ಕಂಡಾ, ಮಹಾಲಿಂಗವೇ, ಸತಿಯಾನು, ಪತಿ ನೀನು ಅಯ್ಯಾ: ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ ನೀನೆನ್ನ ಮನವ ಕಾಯ್ದಿಪ್ಪ ಗಂಡನು! ನಿಮಗೋತ ಮನವನನ್ಯಕ್ಕೆ ಹರಿಸಿದರೆ ನಿನ್ನಭಿಮಾನಕ್ಕೆ ಹಾನಿ, ಕೂಡಲಸಂಗಮದೇವಾ.