ಬಸವಣ್ಣ   
  ವಚನ - 523     
 
ಜಂಗಮವ ಕೂಡಿಕೊಂಡು ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಭಕ್ತಂಗೆ, ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಜಂಗಮಕ್ಕೆ ಆ ಜಂಗಮದ ಕರ್ತವ್ಯವೆ ಆ ಭಕ್ತಂಗೆ ದಾಸೋಹ! ಆ ಭಕ್ತನ ಕಿಂಕಲವೆ ಆ ಜಂಗಮಕ್ಕೆ ದಾಸೋಹ! ಆ ಭಕ್ತನೊಳಗೆ ಜಂಗಮವಡಗಿ, ಆ ಜಂಗಮದೊಳಗೆ ಭಕ್ತನಡಗಿ- ಇದೇನೆಂದು ಹವಣಿಸುವೆನಯ್ಯಾ, ಎರಡೊಂದಾದ ಘನವ? ಇದೇನೆಂದುಪಮಿಸುವೆನಯ್ಯಾ, ತೆರಹಿಲ್ಲದ ಘನವ? ಈ ಎರಡಕ್ಕೆ ಭವವಿಲ್ಲೆಂದು ಕೂಡಲಸಂಗಯ್ಯಾ, ನಿಮ್ಮ ಶ್ರುತಿಗಳು ಹೇಳಿದುವಾಗಿ, ನಿಮ್ಮ ಕರುಣವೆನಗಾಯಿತ್ತು.