ಬಸವಣ್ಣ   
  ವಚನ - 566     
 
ಅಸಮಾಕ್ಷ ಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ ಮಸೆದ ಕೂರಲಗನಿಕ್ಕದೆ ಮಾಣ್ಬನೆ? ಹುಸಿಯಾಗಿ ನುಡಿದವನ ನಾಯಾಗಿ ಬಗುಳಿಸನೆ? ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ? ಗುರುಲಘುವೆಂಬವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೆ? ಪರಸ್ತ್ರೀಗಳುಪಿದವರ ಹಿಡಿ ಕಂಡಗೊಯ್ಯನೆ? ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ ಪಿಂಬೇರ ಮೈಲಿಗೆ ಮೇಳವಾಡುತ್ತಿದ್ದ, ಕಾಣಾ, ತ್ರೈಜಗದೊಳಗೆ!