ಬಸವಣ್ಣ   
  ವಚನ - 590     
 
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ. ಜಲ-ಬಿಂದುವಿನ ವ್ಯವಹಾರವೊಂದೇ: ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ, ಏನ ಕೇಳಿ, ಏನು ಫಲ? ಕುಲಜನೆಂಬುದಕ್ಕಾವುದು ದೃಷ್ಟ? 'ಸಪ್ತಧಾತು ಸಮಂ ಪಿಂಡಂ| ಸಮಯೋನಿ ಸಮುದ್ಭವಂ ಆತ್ಮಜೀವಸಮಾಯುಕ್ತ| ವರ್ಣಾನಾಂ ಕಿಂ ಪ್ರಯೋಜನಂ' ಎಂದುದಾಗಿ, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ; ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ! ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ? ಇದು ಕಾರಣ, ಕೂಡಲಸಂಗಮದೇವಾ, ಲಿಂಗಸ್ಥಲವನರಿದವನೇ ಕುಲಜನು.