ಬಸವಣ್ಣ   
  ವಚನ - 605     
 
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತಯ್ಯಾ; ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಾಯಿತ್ತು. ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ! ನೀನೊಲಿದ ಕುಲಕ್ಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ, ದೇವಾ? 'ಶ್ವಪಚೋಪಿ ಮುನಿಃಶ್ರೇಷ್ಠೋ|| ಯಸ್ತು ಲಿಂಗಾರ್ಚನೇ ರತಃ ಲಿಂಗಾರ್ಚನವಿಹೀನೋಪಿ|| ಬ್ರಾಹ್ಮಣಃ ಶ್ವಪಚಾಧಮಃ' ಎಂದುದಾಗಿ, ಜಾತಿ-ವಿಜಾತಿಯಾದರೇನು? ʼಅಜಾತ ಶರಣೆನ್ನದವನು, ಆತನೆ ಹೊಲೆಯ! ಕೂಡಲಸಂಗಮದೇವಾ.