ಬಸವಣ್ಣ   
  ವಚನ - 622     
 
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು: ಉದ್ಧರಿಸುವನೊಬ್ಬ, ಶಿವಶರಣ, ಸಾಲದೆ? ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ: ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ! ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ: ಕೊಟ್ಟ ದಾಸ ತವನಿಧಿಯ ಪಡೆದ! ಕಪಟದಿಂದೆ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ: ಕೊಟ್ಟ ಕರ್ಣ ಕಳದಲ್ಲಿ ಮಡಿದ! ಕಾಮಾರಿ ಜಂಗಮನಾಗಿ ಬಂದು ಸಿರಿಯಾಳನ ಮಗನ ಬೇಡಿದ: ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರವ ಕೈಲಾಸಕ್ಕೊಯ್ದ! ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ: ಕೊಟ್ಟ ನಾಗಾರ್ಜುನನ ಶಿರ ಹೋಯಿತ್ತು! ಶಿವನು ಜಂಗಮನಾಗಿ ಬಂದು ಸಿಂಧುಬಲ್ಲಾಳನ ವಧುವ ಬೇಡಿದ: ಕೊಟ್ಟ ಸಿಂಧುಬಲ್ಲಾಳ ಸ್ವಯ ಲಿಂಗವಾದ! ಇದು ಕಾರಣ, ಇಲ್ಲಿಯೂ ಲೇಸು, ಅಲ್ಲಿಯೂ ಲೇಸು: ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.