ಬಸವಣ್ಣ   
  ವಚನ - 679     
 
ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು ಪರಿಪರಿಯಲಿ ಬಣ್ಣಿಸಿ ಹೇಳಬಹುದಲ್ಲದೆ, ಆ ದಳವಿದಿರಾದಲ್ಲಿ ಬಿರಿದುಪಚಾರಿಸಿ, ಕಾದಿ ತೋರಲುಬಾರದು. ಮುನ್ನಿನ ಪುರುಷವ್ರತಿಯರು ಓಲಿಸಿದ ಆಯತವ ಪರಿಪರಿಯಲು ಬಣ್ಣಿಸಲು ಬಹುದಲ್ಲದೆ, ಪುರುಷನಿರ್ವಾಣಕ್ಕುರಿವಗ್ನಿಯ ಬಂದು ಹೊಕ್ಕು ತೋರಲುಬಾರದು. ಮುನ್ನಿನ ಪುರಾತನರೆಲ್ಲರು ತನುಮನಧನವನಿತ್ತು ಮಾಡಿ, ನೀಡಿ ಲಿಂಗವ ಕೂಡಿದ ಪರಿಗಳನು ಅನುಭಾವದಲರ್ಥೈಸಿ ಹೇಳಬಹುದಲ್ಲದೆ, ಮಾಡಿ, ನೀಡಿ ತೋರಲುಬಾರದು. ಇಂತೀ ಅರೆಬಿರುದಿನ ಬಂಟರು, ಪುರುಷವ್ರತಿಯರು, ಪುರಾತನರು ಬರಿಯ ಮಾತನಾಡಿ ಹೊರಗೆ ಮೆರೆವರಲ್ಲಾ ; ಪರೀಕ್ಷೆಯುಂಟಾಗಿಯಿದ್ದರೆ ಒಳಗಣವರ ಹೆಸರ ಹಿಡಿದು, ಪರಿಪರಿಯಲು ಹೊಗಳುವರು. ಶರೀರ-ಅರ್ಥ-ಪ್ರಾಣ ಗುರು-ಲಿಂಗ-ಜಂಗಮಕ್ಕೆ ಪರೀಕ್ಷೆ ಉಂಟಾಗಿಯೆ ʼಆಗ ಮಾಹೇಶ್ವರ ಪುರಾತವಳಿ'-ಯೆಂಬ ಪರಮಬಂಧುಗಳಾತನ ನೆನೆನೆನೆದು ಬದುಕುವರು. ಇಂತೀ ಅನುಭಾವದ ಓದಿನ ಅಕ್ಷರಾಭ್ಯಾಸವ ಸಾಧಿಸಿ ತರ್ಕಿಸಿ ನಿಂದಿಸಲಾಗದು. ಕೂಡಲಸಂಗನ ಶರಣರಿಗಲ್ಲದೆ ಅನುಭಾವವಿಲ್ಲಾ!