ಬಸವಣ್ಣ   
  ವಚನ - 707     
 
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ, ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿಯುತ್ತಿರಲಿ, ಮುಟ್ಟುವ ಸ್ತ್ರೀಯ ಕಣ್ಣಮುಂದೆ ಅಭಿಮಾನಗೊಂಡು ನೆರೆಯುತ್ತಿರಲಿ. -ಇಂತೀ ತ್ರಿವಿಧವು ಹೊರಗಣವು- ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡಂಗೊಯ್ಯಲಿ, ಇಕ್ಕುವ ಶೂಲ ಪ್ರಾಪ್ತಿಸಲಿ, ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ; ಮತ್ತೆಯೂ ಲಿಂಗಾರಾಧನೆಯ ಮಾಡುವೆ, ಜಂಗಮಾರಾಧನೆಯ ಮಾಡುವೆ. ಪ್ರಸಾದಕ್ಕೆ ತಪ್ಪೆನು! ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ!