ಬಸವಣ್ಣ   
  ವಚನ - 710     
 
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ, ʼಎನ್ನೊಡಲಿಂಗೆ, ಎನ್ನೊಡವೆಗೆ ಎನ್ನ ಮಡದಿ-ಮಕ್ಕಳಿಗೆಂದುʼ ಕುದಿದೆನಾದರೆ ಎನ್ನ ಮನಕ್ಕೆ ಮನವೇ ಸಾಕ್ಷಿ! 'ಆಸನೇ ಶಯನೇ ಯಾನೇ| ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ| ನರಕೇ ಕಾಲಮಕ್ಷಯಂ' ಎಂಬ ಶ್ರುತಿಯ ʼಬಸವಣ್ಣನೋದುವನುʼ ಎಂಬರು. ʼಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳಿತಿರ್ದು ಓಲೈಸಿಹನೆಂದುʼ ನುಡಿವರಯ್ಯಾ ಪ್ರಮಥರು. ಕೊಡುವೆನುತ್ತರವನವರಿಗೆ? ಕೊಡಲ (ಮ್ಮುವೆ): ಹೊಲೆಯ ಹೊಲೆಯರ ಮನೆಯ ಹೊಕ್ಕು ಸಲೆ ಕೈಕೂಲಿಯ ಮಾಡಿಯಾದರೆಯೂ, ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದರೆ ತಲೆದಂಡ! ಕೂಡಲಸಂಗಮದೇವಾ.