ಬಸವಣ್ಣ   
  ವಚನ - 786     
 
ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ, ಕೊಂಡೆನಾದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದೆನಾದರೆ ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ! ಲಿಂಗಾರ್ಪಿತವಲ್ಲದೆ ಹಲ್ಲುಕಡ್ಡಿಯ ಕೊಂಡರೆ ಬಲ್ಲೆ, ಮುಂದೆ ಭವ ಘೋರನರಕವೆಂಬುದ! ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು: ಅಳವರಿಯದೆ ನುಡಿದೆನು- ಕಡೆ ಮುಟ್ಟಿ ಸಲಿಸದಿದ್ದರೆ ತಲೆದಂಡ! ಕೂಡಲಸಂಗಮದೇವಾ.