ಬಸವಣ್ಣ   
  ವಚನ - 935     
 
ಶಿವ ಶಿವಾ, ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ: ಸತ್ಯಶುದ್ಧವುಳ್ಳವಂಗೆ ಗುರುವಿಲ್ಲ, ಸತ್ಯಶುದ್ಧವುಳ್ಳವಂಗೆ ಲಿಂಗವಿಲ್ಲ, ಸತ್ಯಶುದ್ಧವುಳ್ಳವಂಗೆ ಜಂಗಮವಿಲ್ಲ, ಸತ್ಯಶುದ್ಧವುಳ್ಳವಂಗೆ ಪ್ರಸಾದವಿಲ್ಲ, ಸತ್ಯಶುದ್ಧವುಳ್ಳವಂಗೆ ಗಣತ್ವವಿಲ್ಲ, ಕೇಳಿರೆ, ಸತ್ಯಶುದ್ಧ ದೇವರಿಗೆ ಉಪಚಾರವುಂಟು; ಸತ್ಯಶುದ್ಧ ದೇವರಿಗೆ ಧ್ಯಾನ, ಮೌನ, ಅನುಷ್ಠಾನವುಂಟು; ಸತ್ಯ-ಶುದ್ಧ ಉಪದೇಶಕ್ಕೆ ಜಪ, ತಪ, ಸಂಜೆ, ಸಮಾಧಿ ಹೋಮ, ನೇಮ, ನಿತ್ಯ, ಅಷ್ಟವಿಧಾರ್ಚನೆ, ಷೋಡಶೋಪಚಾರವುಂಟು! ಆದ ಕಾರಣ ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ! ಇವರೆಲ್ಲ ಬ್ರಹ್ಮನಮಕ್ಕಳು! ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ; ಆವ ಸಹಜವೂ ಇಲ್ಲದ ಲಿಂಗೈಕ್ಯ, ಕಾಣಾ, ಕೂಡಲಸಂಗಮದೇವಾ.