ಬಸವಣ್ಣ   
  ವಚನ - 957     
 
ಅಷ್ಟತನುಮೂರ್ತಿ ಲಿಂಗವೆಂದೆಂಬರು ಕೇಳಿರಯ್ಯಾ: ಆದಿಯ ಮಗ ಅತೀತ, ಅತೀತನ ಮಗ ಆಕಾಶ, ಆಕಾಶನ ಮಗ ವಾಯು, ವಾಯುವಿನ ಮಗ ಅಗ್ನಿ, ಅಗ್ನಿಯ ಮಗ ಅಪ್ಪು, ಅಪ್ಪುವಿನ ಮಗ ಪೃಥ್ವಿ, ಪೃಥ್ವಿಯಿಂದ ಸಕಲ ಜನನವು. ಮನಸಿನ ಮಗ ಚಂದ್ರ, ನಯನದ ಮಗ ಸೂರ್ಯ, ದೇಹದ ಮಗನಾತ್ಮ, ಇಂತೀ ಅಷ್ಟತನುವೆಲ್ಲಕ್ಕೆಯು ಉತ್ಪತ್ಯವುಂಟು. ಉತ್ಪತ್ಯರಹಿತ ಅಯೋನಿಜ ಶೂನ್ಯನಿರಾಳ ನಮ್ಮ ಕೂಡಲಸಂಗಮದೇವಂಗೆ ಮಾತಾಪಿತರಿಲ್ಲ.