ಬಸವಣ್ಣ   
  ವಚನ - 966     
 
ಅಂಗಲಿಂಗ ಸಂಗಸುಖ ಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ. ಏಕಲಿಂಗಪರಿಗ್ರಾಹಕನಾದ ಬಳಿಕ, ಆ ಲಿಂಗನಿಷ್ಟೆ ಕಟ್ಟಿಗೊಂಡು, ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ, ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ ಮನದಲ್ಲಿ ನೆನೆ(ಯ)ಲಿಲ್ಲ, ಮಾಡಲೆಂತೂ ಬಾರದು. ಇಷ್ಟೂ ಗುಣವಳವಟ್ಟಿತ್ತಾದಡೆ ಆತನೀಗ ಏಕಲಿಂಗನಿಷ್ಟಾಚಾರಯುಕ್ತನಾದ ವೀರಮಾಹೇಶ್ವರನು. ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ ವೀರಶೈವ ಷಡುಸ್ಥಲಕ್ಕೆ ಹೊರಗಾ(ಗೆ) ನರಕಕ್ಕಿಳಿವನು ಕಾಣಾ, ಕೂಡಲಸಂಗಮದೇವಾ.