ಬಸವಣ್ಣ   
  ವಚನ - 968     
 
ಅಂಗುಲ ಹನ್ನೆರಡು ಕೂಡಲು ಒಂದು ಗೇಣು, ಗೇಣು ಎರಡು ಕೂಡಲು ಒಂದು ಮೊಳ, ಮೊಳವೆರಡು ಕೂಡಲು ಒಂದು ಹಸ್ತ, ಹಸ್ತವೆರಡು ಕೂಡಲು ಒಂದು ಮಾರು, ಮಾರೆರಡು ಕೂಡಲು ಒಂದು ಜಂಘೆ, ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ, ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ, ಹರದಾರಿ ನಾಲ್ಕು ಕೂಡಲು ಒಂದು ಯೋಜನ, ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು. ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ ಕೂಡಲಸಂಗಯ್ಯಾ, ನಿಮ್ಮೊಳು ಕಂಡು ಸುಖಿಯಾಗಿರ್ದೆನು.