ಬಸವಣ್ಣ   
  ವಚನ - 986     
 
ಅಯ್ಯಾ, ಎನ್ನ ಹೃದಯದಲ್ಲಿ ನ್ಯಸ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗ ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ, ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ. ಅಯ್ಯಾ, ಎನ್ನ ಸ್ತ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ, ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ, ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.