ಬಸವಣ್ಣ   
  ವಚನ - 1007     
 
ಅಯ್ಯಾ, ಹಿಂದೆಯಾನು ಮಾಡಿದ ಮರಹಿಂದ ಬಂದೆನೀ ಭವದಲ್ಲಿ. ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗೀತಂಗಳ ಆಡಿ ಹಾಡಿ, ಆ ದಾಸೋಹವೆಂಬ ಮಹಾಗಣಸಂಕುಳದೊಳೆನ್ನನಿರಿಸಿ, ನಿಮ್ಮ ಭಕ್ತಿಯ ಘನವ ನೀವೆ ಮೆರೆಯಲೆಂದು ಪರವಾದಿ ಬಿಜ್ಜಳನ ತಂದೊಡ್ಡಿ, ಎನ್ನನು ಅವನೊಡನೆ ಹೋರಿಸಿ, ಮುನ್ನೂರ ಅರವತ್ತು ಸತ್ತ ಪ್ರಾಣವನೆತ್ತಿಸಿ, ಮೂವತ್ತಾರು ಕೊಂಡೆಯವ ಗೆಲಿಸಿ, ಎಂಬತ್ತೆಂಟು ಪವಾಡಂಗಳಂ ಕೊಂಡಾಡಿ, ಮರ್ತ್ಯಲೋಕದ ಮಹಾಗಣಂಗಳ ಒಕ್ಕುದನಿಕ್ಕಿ ಎನ್ನ ಸಲಹಿದಿರಿ. ನಿಮ್ಮ ಮಹಾಗಣಂಗಳು ಮೆಚ್ಚಿ, ಎನ್ನ ಸೂತಕವ ತೊಡೆದ ಪ್ರಭುದೇವರ ಕರುಣದಿಂದ ಪ್ರಾಣಲಿಂಗಸಂಬಂಧ ಸಯವಾಯಿತ್ತು. ನೀವು ಕಳುಹಿದ ಬೆಸನು ಸಂದಿತ್ತು, ಉಘೇ, ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ.