ಬಸವಣ್ಣ   
  ವಚನ - 1041     
 
ಆದಿ ಭಕ್ತ, ಅನಾದಿ ಜಂಗಮ, ಆದಿ ಶಕ್ತಿ, ಅನಾದಿ ಶಿವನು ನೋಡಾ. ಎನ್ನ ಆದಿಪಿಂಡಕ್ಕೆ ನೀನೆ ಆಧಾರವಾಗಿ ತೋರಿದಡೆ (ಎನ್ನ) ಹೃದಯಕಮಲದಲ್ಲಿ ನಿಮ್ಮ ಕಂಡೆನು. ಆ ಕಂಬ ಜ್ಞಾನವೆ ಜಂಗಮ, ಆ ಜಂಗಮವಿಡಿದಲ್ಲದೆ ಲಿಂಗವ ಕಾಣಬಾರದು. ಆ ಜಂಗಮವಿಡಿದಲ್ಲದೆ ಗುರುವ ಕಾಣಬಾರದು, ಆ ಜಂಗಮವಿಡಿದಲ್ಲದೆ ಪ್ರಸಾದವ ಕಾಣಬಾರದು. ಕಾಯ ಭಕ್ತ, ಪ್ರಾಣ ಜಂಗಮವೆಂಬ ವಚನವ ತಿಳಿಯಲು ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯಾ? ಇದು ಕಾರಣ, ನಿಮ್ಮ ಘನವ ಕಿರಿದು ಮಾಡಿ, ಎನ್ನನೊಂದು ಘನವ ಮಾಡಿ ನುಡಿವಿರಿ, ಕೂಡಲಸಂಗಮದೇವಾ.