ಬಸವಣ್ಣ   
  ವಚನ - 1043     
 
ಆದಿಯನಾದಿಯಿಂದತ್ತತ್ತ ಮುನ್ನ ಲಿಂಗಜಂಗಮವೆಂಬುದನಾರು ಬಲ್ಲವರಿಲ್ಲವೆಂದು, ಇದರ ಸಕೀಲಸಂಬಂಧವ ತಿಳುಹಲೆಂದು, ಮರ್ತ್ಯಕ್ಕೆ ಕಳುಹಿದನು ಶಶಿಧರನು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನಲ್ಲದೆ ಮತ್ತಾರನೂ ಕಾಣೆ. ಶಿಷ್ಯಂಗೆ ಗುರು ಉಪದೇಶವ ಮಾಡಬೇಕಲ್ಲದೆ, ಗುರುವಿಂಗೆ ಶಿಷ್ಯನನುಗ್ರಹವ ಮಾಡಿದ ಠಾವುಂಟೆ? ಎನ್ನ ಅರಿವಿನ ಆದಿಗೆ ನೀನೆ ಕರ್ತನೆಂದು ನಾನಿರಿತಿರಲು ನಿನಗೆ ನಾನಿನ್ನು ಅನುಗ್ರಹವ ಮಾಡುವ ಪರಿ ಎಂತಯ್ಯಾ ? ಕೂಡಲಸಂಗಮದೇವರ ಸ್ವರೂಪವೆಂದು ನಿನ್ನ ಕಂಡಿಪ್ಪೆನು ಕಾಣಾ ಚೆನ್ನಬಸವಣ್ಣಾ.