ಬಸವಣ್ಣ   
  ವಚನ - 1078     
 
ಎನ್ನಂತರಂಗದೊಳಗೆ ಅರಿವಾಗಿ, ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು, ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ, ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ, ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ- ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ, ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.