ಬಸವಣ್ಣ   
  ವಚನ - 1079     
 
ಎನ್ನಂತರಂಗ ನೀವಯ್ಯಾ, ಎನ್ನ ಬಹಿರಂಗ ನೀವಯ್ಯಾ, ಎನ್ನ ಅರಿವು ನೀವಯ್ಯಾ, ಎನ್ನ ಮರಹು ನೀವಯ್ಯಾ, ಎನ್ನ ಭಕ್ತಿ ನೀವಯ್ಯಾ, ಎನ್ನ ಯುಕ್ತಿ ನೀವಯ್ಯಾ, ಎನ್ನ ಆಲಸ್ಯ ನೀವಯ್ಯಾ, ಎನ್ನ ಪರವಶ ನೀವಯ್ಯಾ, ಸಮುದ್ರವ ಹೊಕ್ಕ ಕಾಲುವಳ್ಳದಲ್ಲಿ ಕೊರತೆಯನರಸುವುದೆ, ಆ ಸಮುದ್ರವು? ಎನ್ನ ಲೇಸು ಹೊಲ್ಲೆಹವೆಂಬುದು ನಿಮ್ಮದೆಂಬುದ ನೀವೆ ಬಲ್ಲಿರಿ, ಇದಕ್ಕೆ ನಿಮ್ಮ ಪಾದವೆ ಸಾಕ್ಷಿ, ಎನ್ನ ಮನವೆ ಸಾಕ್ಷಿ, ಕೂಡಲಸಂಗಮದೇವಾ.