ಬಸವಣ್ಣ   
  ವಚನ - 1093     
 
ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ, ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜವೀರಶೈವಾಚಾರವನರುಹಿ ತೋರಿ, ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿ ಸಂದಿಸಿದ ಶೈವಕರ್ಮವ ಕಳೆದು, ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು, ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ, ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ, ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು, ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ ಶಿವಸದಾಚಾರದ ಘನವನರುಹಿ ತೋರಿ, ಮರ್ತ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ, ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ, ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕುವೆನು.