ಬಸವಣ್ಣ   
  ವಚನ - 1096     
 
ಎನ್ನ ಮನವು ನಿಮ್ಮ ಚರಣವ ಕಂಡ ಬಳಿಕ ಬೆರಸಿಯಲ್ಲದೆ ಅಗಲಿ ಸೈರಿಸಲಾರೆನಯ್ಯಾ. ತ್ರಾಹಿ ತ್ರಾಹಿ, ಘನಮಹಿಮಾ, ನಿಮ್ಮ ಪಾದಾರ್ಚನೆಗೆ ಎನ್ನ ಪರಮಾನಂದಜಲವ ತುಂಬುವೆನಯ್ಯಾ. ಪೂಜೆಯ ಮಾಡುವಡೆ ಎನ್ನ ಹೃದಯಕಮಲವನ(ರ್ಪಿ)ಸುವೆ, ಅರತಿಯಿಂದ ಆರತಿಯನೆತ್ತುವೆ, ಎನ್ನ ಮಹಾಪ್ರಕಾಶದ ಧೂಪವ ಬೀಸುವೆ, ಎನ್ನ ಸ್ವಾನುಭಾವದ ಗಂಧವನೀವೆ. ಈ ತೆರನಲ್ಲದೆ ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಕ್ಕೆ ಬೇರೆ ತೆರನ ಕಾಣೆನಯ್ಯಾ. ಕೂಡಲಸಂಗಮದೇವಯ್ಯಾ, ಪ್ರಭುವೆನ್ನ ಪ್ರಾಣಲಿಂಗವೆಂಬುದು ಎನಗಿಂದು ಕಾಣಬಂದಿತ್ತು ನೋಡಯ್ಯಾ.