ಬಸವಣ್ಣ   
  ವಚನ - 1106     
 
ಏನೆಂದುಪಮಿಸುವೆನಯ್ಯಾ? ತನ್ನಿಂದ ತಾ ತೋರದೆ, ಗುರುಮುಖದಿಂದ ತೋರಿದ ತನ್ನ ನಿಲವ, ನಿರುಪಮನು. ಶಬ್ದಮುಗ್ಧವಾಗಿ, ಇದ್ದೆಡೆಯನಿದಿರಿಂಗೆ ತೋರದೆ ಇರವೆ ಪರವಾಗಿರ್ದ ಅಜಡನು. ಇನನುದಯಕಾಲಕ್ಕೆ ಕುಕ್ಕುಟ ಧ್ವನಿದೋರುವಂತೆ ಘನಮಹಿಮರ ದರ್ಶನದಿಂದ ಸತ್ಪ್ರಣವವ ತಾನಾಗಿ ನುಡಿದ ಮೂಲಿಗನು, ಕೂಡಲಸಂಗಮದೇವರಲ್ಲಿ ಬೆರೆಸಿ ಬೇರಿಲ್ಲದಿಪ್ಪ ಮರುಳುಶಂಕರದೇವರ ನಿಲವ ಪ್ರಭುದೇವರು ಸಿದ್ಧರಾಮಯ್ಯದೇವರು ಹಡಪದಪ್ಪಣ್ಣನಿಂದ ಕಂಡು ಎನ್ನ ಜನ್ಮ ಸಫಲವಾಯಿತ್ತಯ್ಯಾ.