ಬಸವಣ್ಣ   
  ವಚನ - 1127     
 
ಕಕ್ಷೆ ಕರಸ್ಥಲ ಉತ್ತಮಾಂಗ ಉರಸಜ್ಜೆ ಅಂಗಸೋಂಕು ಅಮಳೋಕ್ಯವೆಂಬುದ ನಾನು ಮನದಲ್ಲಿ ಅರಿಯದಂದು, ಭಾವ ನಿರ್ಭಾವವೆಂಬುದನರಿದು ಆಯತ ಸ್ವಾಯತವ ಮಾಡಲ್ಕೆ ಬಂದ ಪದಾರ್ಥವು ಲಿಂಗಮುಖದಲ್ಲಿ ಅರ್ಪಿತವಾಗದೆಂದು, ಜಂಗಮಮುಖದಲ್ಲಿ ಬಂದ ಪದಾರ್ಥವಲ್ಲದೆ ಅರ್ಪಿತವಾಗದೆಂದು, ಆ ಜಂಗಮವನೆನ್ನ ಮನದಲ್ಲಿ ನೆನೆದುಕೊಂಡು ಆ ಜಂಗಮದಾಸೋಹಕ್ಕೆ ಎನ್ನ ಮನವು ವೇದ್ಯವಾದಲ್ಲಿ ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದಲ್ಲಿ, ಲಿಂಗವೂ ಹುಸಿ, ಜಂಗಮವೂ ಹುಸಿಯೆಂದು ಪರವಾದಿ ಬಿಜ್ಜಳನು ಸಂ(ವಾ)ದಿಸುವಲ್ಲಿ, ಅವರನು ಆದಿಗಣೇಶ್ವರನೆಂದರಿಯದೆ ತರ್ಕಿಸುವಲ್ಲಿ, ಅವನೆನ್ನ ಭಕ್ತಿಗೆ ಒರೆಗಲ್ಲಾದಲ್ಲಿ, ಆತನು ಭಕ್ತಿಯ ಪಥವಲ್ಲೆಂಬುದ, ನಾನಹುದೆಂಬುದ - ಈ ಎರಡನೂ ನೀನು ಸೂತ್ರಧಾರಿಯಾಗಿ ಆಡಿಸುವಲ್ಲಿ, ಶಿವಭಕ್ತಿಯ ಮುಖ ಮುಸುಕು ತೆಗೆವಲ್ಲಿ, ಮೂವತ್ತಾರು ಕೊಂಡೆಯವ ಪರಿಹರಿಸಿ ಎಂಬತ್ತೆಂಟು ಪವಾಡವ ಮೆರೆವಲ್ಲಿ, ಮುನ್ನೂರರುವತ್ತು ಸತ್ತ ಪ್ರಾಣವನೆತ್ತುವಲ್ಲಿ ಅಂದು ನೀನೇನಾಗಿರ್ದೆ ಹೇಳಾ, ಕೂಡಲಸಂಗಮದೇವಾ.