ಬಸವಣ್ಣ   
  ವಚನ - 1160     
 
ಕೇಳಿ ಭೋ ! ಕೇಳಿ ಭೋ ! ವಿಪ್ರರೆಲ್ಲರೂ ಬ್ರಹ್ಮಾಂಡಪುರಾಣದಲ್ಲಿ ನಿಮ್ಮ ಬ್ರಹ್ಮ ನುಡಿದ ವಾಕ್ಯವು; ʼವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞಾನವೇದಿನಾಮ್ ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಬಭಃʼ ಎಂದುದಾಗಿ ನಂಬಿ ಧರಿಸಿ ಭೋ ! ವಿಪ್ರರೆಲ್ಲರೂ ಶ್ರೀಮಹಾಭಸಿತವ. ಇದ ನಂಬಿಯೂ ನಂಬದೆ ಅಜ್ಞಾನದಿಂದ ಶ್ರೀಮಹಾಭಸಿತವ ಬಿಟ್ಟು, ಮಣ್ಣು ಮಸಿ ಮರದ ರಸಂಗಳ ಮೋಹದಿಂದ ನಿಮ್ಮ ಹಣೆಯಲ್ಲಿ ಬರೆದುಕೊಂಡಿರಾದಡೆ ನಮ್ಮ ಕೂಡಲಸಂಗಮದೇವರಲ್ಲಿ, ನಿಮ್ಮ ಅಧಿದೈವವೇ ನಿಮ್ಮ ಕಿವಿ ಮೂಗ ಕೊಯಿದು, ಇಟ್ಟಿಗೆಯಲೊರಸಿ, ಕನ್ನಡಿಯ ತೋರಿ, ನಡೆಸಿ ನರಕದಲ್ಲಿ ಕೆಡುಹದೆ ಬಿಡ ಕಾಣಿ ಭೋ ! ಇದನರಿದು ಮರೆಯದೆ ಧರಿಸಿ ಭೋ ! ಕೆಡಬೇಡ, ಕೆಡಬೇಡ, ಮಹತ್ತಪ್ಪ ಶ್ರೀಮಹಾಭಸಿತವ ಧರಿಸಿ ಮುಕ್ತರಾಗಿರೇ.