ಬಸವಣ್ಣ   
  ವಚನ - 1168     
 
ಕ್ರಿಯಾಜ್ಞಾನಸಂಬಂಧವೆಂದು ನುಡಿವರು- ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು. ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು, ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು. ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು, ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು. ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ ಕ್ರಿಯೆಯೆ ತನು, ಜ್ಞಾನವೆ ಪ್ರಾಣ. ತನು ಲಿಂಗವಾಗಿ, ಪ್ರಾಣ ಜಂಗಮವಾಗಿ, ತನುವ ಸಯನಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ, ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ.