ಬಸವಣ್ಣ   
  ವಚನ - 1175     
 
ಗುರುಲಿಂಗಜಂಗಮದ ಘನಪ್ರಸಾದವ ಪಡಕೊಂಡು, ಅಂಗವಿಕಾರಕ್ಕೆ ಭುಂಜಿಸುವ ಅವಿಚಾರಿಗಳ ವಿವರವೆಂತೆಂದಡೆ; ಆದಿಸ್ವಾದಿ ಅನಾಹತ ಹೃದಯ ದೀನಸ್ಥಿತಿಯ ತಿಳಿಯದೆ, ಆದಿ ಅನಾದಿಯ ಭೇದಿಸಲರಿಯದೆ, ಆದಿಪ್ರಸಿದ್ಧವಾದ ಪರಮಗುರುವಿನಲ್ಲಿ ಸಮಯದ ಹಂಗಿಂಗೆ ಗಡಣಿಸಿಕೊಂಡು, ಬಲಭಿಚಾರಿಗಳು ನುಗ್ಗಿಯ ಬೀಜ, ಮಾವಿನ ಬೀಜ, ದಂಟುದಡಿ ಮೊದಲಾದ ನಾನಾ ಕಠಿಣಂಗಳನು ಅಂಗವಿಕಾರಕ್ಕೆ ಭುಂಜಿಸುವ ಭಕ್ಷಿಸುವ ಭವಕರ್ಮಿಗಳು. ಅಂಗವಿಕಾರಕ್ಕೆ ಭೂತನಂತೆ ಒಟ್ಟಿಕೊಂಡು, ಕರಿ ಸೂಕರನಂತೆ ಅಗ್ನಿಯಲ್ಲಿ ಸುಡು ಎಂಬ ಲಿಂಗದ್ರೋಹಿಗೇಕೊ ಪ್ರಸಾದ? ಅಂತಪ್ಪ ಪರಮಪಾತಕರಿಗೆ ಪಾದೋದಕ ಪ್ರಸಾದವ ಕೊಡಲಾಗದು. ಇಂತಪ್ಪ ಪ್ರಸಾದದಿಂದೊಗೆದ ಕಠಿಣವನು ಅಗ್ನಿಯಲ್ಲಿ ದಗ್ಧವ ಮಾಡಲಾಗದು. ಬೆಂಕಿಯಲ್ಲಿ ಸುಡು ಎಂಬುದಕ್ಕೆ ಕುರಿಯ ಹೋಮವೆ? ಮಾತಂಗಿಯ ಮಕ್ಕಳ ಸಂತಾನವೆ? ಸತ್ತರೆ ಸುಡಿಸಿಕೊಂಬ ಶ್ವಪಚ ಮಾತಂಗಿಯ ಮಕ್ಕಳ ಸಂತಾನವನೇನೆಂಬೆನಯ್ಯಾ ! ಆ ಶಿವನ ಪ್ರಸಾದವ ಸುಡುವರೆ? ಸತ್ತ ಹಾರುವನ ಅಗ್ನಿಯಲ್ಲಿ ಸುಡು ಎಂಬ ದ್ರೋಹಿಗೇಕೊ ಪ್ರಸಾದ? ಅರಿಯದುದೆಲ್ಲ ಜ್ಞಾನದೊಳು ಅರಿದು, ಅರುಹಿಸಿಕೊಂಡ ಬಳಿಕ ತಿಳಿದಾಚರಿಸುವುದು, ಭಕ್ತಿಜ್ಞಾನವೈರಾಗ್ಯವಿಡಿದಾಚರಿಸುವುದೆ ಗುರುಭಕ್ತಿ. ಇಂತಪ್ಪ ಗುರುಮಾರ್ಗಾಚಾರವಸಾಧ್ಯವೆಂಬವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಇಂತಪ್ಪ ಪ್ರಸಾದವಿಲ್ಲದವಂಗೆ ಯುಕ್ತಿಯೆಂಬರು ಎಂದೆಂದಿಗೂ ಇಲ್ಲ. ಅವಂಗೆ ಇಹವಿಲ್ಲ, ಪರಕ್ಕೆ ಸಲ್ಲನೆಂಬ ಗುರುವಚನವುಂಟು, ಪ್ರಭುವೆ ನಿಮ್ಮಾಣೆ, ಕೂಡಲಸಂಗಮದೇವಾ.