ಬಸವಣ್ಣ   
  ವಚನ - 1184     
 
ಘನಗಂಭೀರವಾರುಧಿಯೊಳಗೆ ತೋರುವ ವೀಚಿಗಳು ಆ ವಾರುಧಿಯ ಬಿಟ್ಟು ತೋರಬಲ್ಲವೆ? ತೋರಿದಡೆ ಆ ವಾರುಧಿ ತನ್ನ ತಾ ಜರೆದುಕೊಂಬುದೆ? ನಿಮ್ಮೊಳಡಗಿದ ಪ್ರಮಥರೆಲ್ಲರ ಗುಣಾದಿಗುಣಂಗಳೆಲ್ಲವನು ನಿಮ್ಮಡಿಗಳೆತ್ತಲುಂಟೆ ? ಜಗದೊಳಗೆ ಕೂಡಿ ಪರಿಪೂರ್ಣನಾದ ಬಳಿಕ, ಇದಿರ ನೋಡಿ ಜರೆದು ನುಡಿವ ಠಾವಾವುದು ಹೇಳಯ್ಯಾ? ಕೂಡಲಸಂಗಮದೇವಯ್ಯಾ, ನಿಮ್ಮ ನೀವು ಪರಿಣಾಮಿಸಿಕೊಂಬುದಲ್ಲದೆ ಭಿನ್ನವ ಮಾಡಲುಂಟೆ?