ಬಸವಣ್ಣ   
  ವಚನ - 1226     
 
ದೇಹವೆಂಬೆರಡಕ್ಕರವನು ಜೀವವೆಂದರಿದೆನಯ್ಯಾ, ಜೀವವೆಂಬೆರಡಕ್ಕರವನು ಹಂಸನೆಂಬ ದಳಕ್ಕೆ ವಿಭಾಗಿಸಿದೆನಯ್ಯಾ. ಹಂಸವೆಂಬೆರಡಕ್ಕರವನು ಜ್ಞಾನಚಕ್ಷುವಿನ ಭ್ರೂಮಧ್ಯದಲ್ಲಿ ವಿಭಾಗಿಸಿದೆನಯ್ಯಾ. ಒಂದು ದಳವ ಕರ್ತನ ಮಾಡಿ, ಒಂದು ದಳವ ಭೃತ್ಯನ ಮಾಡಿ ಈ ಎರಡು ದಳದ ನಡುವಿರ್ಪ ಪರಂಜ್ಯೋತಿಯನು ತ್ರಿಕೂಟವೆಂದರಿದು ಕೂಡಿದೆನಯ್ಯಾ. ಇಂತು ಕೂಡಿದಲ್ಲಿ ಪರಿಚರ್ಯವ ಮಾಡುತಿರ್ದೆನಯ್ಯಾ. ಮೊದಲ ಪರಿಚರ್ಯದಲ್ಲಿ ನಿರ್ಮಳೋದಕವ ತುಂಬಿದೆ, ಒಂದು ದಳದೊಳಗೆ. ಎರಡನೆಯ ಪರಿಚರ್ಯದಲ್ಲಿ ಒಂದು ದಳದಲ್ಲಿ ಆ ಉದಕವ ಗಡಣಿಸುತಿರ್ದೆನಯ್ಯಾ. ಇರಲಿರಲು ಎರಡು ದಳವು ಅಳಿದು ಜಲ ಮೇರೆದಪ್ಪಲು ಮನ ಮೇರೆದಪ್ಪಿ ಆರೋಗಿಸಿದೆನಯ್ಯಾ. ಆರೋಗಿಸಿದ ತೃಪ್ತಿಯ ನೀನೆ ಬಲ್ಲೆ, ಕೂಡಲಸಂಗಮದೇವಾ.