ಬಸವಣ್ಣ   
  ವಚನ - 1260     
 
ನೋಡಿರೇ ನೋಡಿರೇ ಪೂರ್ವದತ್ತವ; ವರುಣ ಹೆಳವ, ರವಿ ಕುಷ್ಟ, ಶುಕ್ರನಂಧಕ, ಶನಿಗೆ ಸಂಕಲೆ, ಬಲಿಗೆ ಬಂಧನ, ಸೀತೆಗೆ ಧ್ರೌಪದಿಗೆ ಸೆರೆ, ಹರಿ ಹಂದಿಯಾದ, ಅರುಹಂಗೆ ಲಜ್ಜೆ, ಬ್ರಹ್ಮನ ಶಿರಹೋಯಿತ್ತು, ಬಲ್ಲಿದನೆಂಬವನ ಕೊಡೆವಿಡಿಸದೆ ವಿಧಿ? ಜತ್ತಕನೆಂಬವನ ಕತ್ತೆಯ ಮಾಡಿತ್ತು. ದಶಮುಖನ ನಾಯ ಡೋಣಿಯಲ್ಲಿ ಉಣಿಸಿತ್ತು. ದೇವೇಂದ್ರನ ಮೈಯ್ಯ ನಾಣುಗೆಡಿಸಿತ್ತು. ಶೂದ್ರಕನ ತಲೆ ಕಂಚಿಯಾಲದಲ್ಲಿ ನೇರಿತ್ತು. ಕೂಡಲಸಂಗಮದೇವಯ್ಯಾ, ನೀ ಮಾಡಿದ ಮಾಯೆಯನನಂತರನಾಳಿಗೊಂಡಿತ್ತು.