ಬಸವಣ್ಣ   
  ವಚನ - 1262     
 
ಪಂಚಮುಖವ ಪೂಜಿಸುವಯ್ಯಗಳು ನೀವು ಕೇಳಿರಯ್ಯಾ; ಪಂಚಲಿಂಗವಾವುದೆಂಬುದ ನೀವು ಕೇಳಿರೆ ! ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ ಈ ಐದರಲ್ಲಿ ನೊಂದುಬೆಂದಯ್ಯಗಳು ನೀವು ಕೇಳಿರೆ ! ನಾನವನೊಲ್ಲೆ, ನಾನವನಂಗವಿಸುವನಲ್ಲ, ನಾನವ ಹಿಡಿವನಲ್ಲ, ಸನ್ಯಾಸದೊಳಗಾಡಿ ಸಮೀಪಕ್ಕೆ ಬಾಹಾತನಲ್ಲ, ಕ್ಷಪಣರೊಳಗಾಡಿ ಲಜ್ಜೆದೋರುವವನಲ್ಲ, ಲಿಂಗದೊಳಗಾಡಿ ಅಂಗವ ಬಿಡುವವನಲ್ಲ, ಸರ್ವದೊಳಗಾಡಿ ಅಧೋಗತಿಗಿಳಿವವನಲ್ಲ. ನಾನು ಜಂಗಮದಾಸೋಹದೊಳಗಾಡಿ ನಿಮ್ಮ ಕಂಡೆ ಕೂಡಲಸಂಗಮದೇವಾ.