ಬಸವಣ್ಣ   
  ವಚನ - 1333     
 
ಲಿಂಗ ಜಂಗಮದ ಪ್ರಸಾದವಲ್ಲದೆ, ಭೂತದ್ರವ್ಯವ ಮುಟ್ಟಬಾರದು, ಶಿಷ್ಟೋದನವಲ್ಲದುದ ಕೊಳ್ಳಬಾರದು. ಅದೆಂತೆಂದಡೆ: 'ಶೂದ್ರಾನ್ನಂ ಸೂತಕಸ್ಯಾನ್ನಂ ನೈವೇದ್ಯಂ ಶ್ರಾದ್ಧಮೇವ ಚ ಪತಿತಾನ್ನಂ ಸಮೂಹಾನ್ನಂ ರಾಜಾನ್ನಂ ಚೈವ ವರ್ಜಯೇತ್' ಎಂಬೀ ಮನುಸ್ಮೃತಿಯಲ್ಲಿ ಹೇಳುವ ಅನ್ನವಾವುವೆಂದೊಡೆ; ಶಿವೋಪದೇಶವಿಲ್ಲದವರಲ್ಲಿಯ(ದು) ಶೂದ್ರಾನ್ನ, ಹೊಲೆಗಳೆವುದಕ್ಕೆ ಮಾಡಿದು(ದು) ಸೂತಕಾನ್ನ, ಸ್ಥಾವರನಿಮಿತ್ತವಾದುನದು(ದು) ನೈವೇದ್ಯಾನ್ನ, ಪಿತೃಕಾರ್ಯಕ್ಕಾದುದು ಶ್ರಾದ್ಧಾನ್ನ, ಬಲಿಗೆ ಹಾಕಿದುದು ಪತಿತಾನ್ನ, ಪರ್ವಕ್ಕೆ ಮಾಡಿದುದು ಸಮೂಹಾನ್ನ, ಆವುದೊಂದು ಸಿರಿಗರ ಹೊಡೆದಲ್ಲಿ ಪಾಕಭೇದವಾಗಿ ಟೊಂಬರಕ್ಕೆ ಬೇರೆ ಮಾಡಿದುದು ರಾಜಾನ್ನ. ಇಂತೀ ಸಪ್ತವಿಧದನ್ನವ ಬಿಟ್ಟು `ನ ಜಾತಿಭೇದೋ ಲಿಂಗಾರ್ಚೇ ಸರ್ವೇ ರುದ್ರಗಣಾಃ ಸ್ಮೃತಾಃ' ಎಂಬುದನರಿದು ಜಾತಿಭೇದವ ಮರೆದು, ಶಿವಭಕ್ತರ ಮನೆಯ ಅನ್ನವ ಶಿವಪ್ರಸಾದವೆಂದು ಕೊಂಡು ಸರ್ವ ಬವರವ ಜಯಸಿದರೆಂಬುದಕ್ಕೆ ಬ್ರಹ್ಮಾಂಡಪುರಾಣೇ; 'ಆಧಿವ್ಯಾಧಿವಿನಾಶಾಯ ಚರೋಚ್ಚಿಷ್ಟಂ ತು ಸೇವಯೇತ್ ಮಾರ್ಗಾದಿಷು ಚ ಶೈವಾನಾಂ ಚ ಪುಣ್ಯತೀರ್ಥಂ ಸುದರ್ಶನಂ' ಎಂದುದಾಗಿ ಶೈವಾದಿಗಳು ಜಂಗಮಪ್ರಸಾದವ ಕೊಂಡು ಮುಕ್ತರಾದರಲ್ಲದೆ, ಜಂಗಮಪ್ರಸಾದದಲ್ಲಿ ವಿಶ್ವಾಸಹೀನರನೇನೆಂಬೆನಯ್ಯಾ ಕೂಡಲಸಂಗಮದೇವಾ.